ಮೈಸೂರು ರಾಜ್ಯಕ್ಕೆ ಸರ್‌.ಎಂ.ವಿ ಕೊಡುಗೆ ಅಪಾರ : ವಿಶ್ವೇಶ್ವರ

ಮೈಸೂರು ರಾಜ್ಯಕ್ಕೆ ಸರ್‌.ಎಂ.ವಿ ಕೊಡುಗೆ ಅಪಾರ : ವಿಶ್ವೇಶ್ವರ

ಡಿಆರ್‌ಆರ್‌ಕಾಲೇಜಿನ ಪ್ರಾಚಾರ್ಯ ಸಿ.ಆರ್‌. ವಿಶ್ವೇಶ್ವರ ಅಭಿಮತ

ದಾವಣಗೆರೆ, ಸೆ.27- ಮೈಸೂರು ರಾಜ್ಯದ ಅಭಿವೃದ್ಧಿಗೆ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ ಎಂದು ಡಿಆರ್‌ಆರ್‌ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯ ಸಿ.ಆರ್‌. ವಿಶ್ವೇಶ್ವರ ಸ್ಮರಿಸಿದರು.

ಕಸಾಪ, ಡಿಆರ್‌ಆರ್‌ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಸಹಯೋಗದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್‌.ಎಂ. ವಿಶ್ವೇಶ್ವರಯ್ಯರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಸಾಮಾನ್ಯ ಹಾಗೂ ಬಡತನ ಕುಟುಂಬದಲ್ಲಿ ಜನಿಸಿದ ಸರ್‌.ಎಂ.ವಿ ಅವರು, ಅಸಾಮಾನ್ಯ ಸಾಧನೆ ಮಾಡುವ ಮೂಲಕ ಯುವಕರಿಗೆ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.

ವಿಶ್ವೇಶ್ವರಯ್ಯರವರ ತಾಂತ್ರಿಕ ನೈಪುಣ್ಯತೆಯಿಂದಾಗಿ ಅನೇಕ ಅಣೆಕಟ್ಟುಗಳು ಇಂದಿಗೂ ಸುಭದ್ರವಾಗಿವೆ. ಈ ನಿಟ್ಟಿನಲ್ಲಿ ಸರ್‌.ಎಂ.ವಿ ಅವರು ಅರ್ಥ ಪೂರ್ಣ ಇಂಜಿನಿಯರ್‌ ಆಗಿದ್ದರು ಎಂದು ಹೇಳಿದರು.

ಶಿಸ್ತು, ಸಮಯ ಪ್ರಜ್ಞೆ ಮತ್ತು ಪ್ರಾಮಾಣಿಕತೆ ಗುಣಗಳು ವಿಶ್ವೇಶ್ವರಯ್ಯರಲ್ಲಿತ್ತು, ಹಾಗಾಗಿ ಇಂತಹ ಆದರ್ಶ ವ್ಯಕ್ತಿಗಳ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಮತ್ತು ಸಂಸ್ಕೃತಿ-ಸಂಸ್ಕಾರಕ್ಕೆ ದಕ್ಕೆ ಬರದಂತೆ ಬದುಕಬೇಕು ಎಂದು ಕಿವಿಮಾತು ಹೇಳಿದರು.

ಅಣೆಕಟ್ಟೆಯ ನೀರು ಬಳಕೆಮಾಡಿಕೊಂಡು ಬೆಳೆ ಬೆಳೆಯುವ ರೈತರು ಅದಕ್ಕೆ‌‌ ಪ್ರತಿಯಾಗಿ ಇಂತಿಷ್ಟು ಕಂದಾಯ ಕಟ್ಟಿದರೆ, ಆ‌‌ ಹಣವನ್ನು ಮತ್ತೊಂದು ‌ಅಭಿ ವೃದ್ಧಿ‌ ಕಾರ್ಯಕ್ರಮಕ್ಕೆ ಬಳಕೆಮಾಡಿ ಕೊಳ್ಳಬಹುದು.‌ ಇದರಿಂದ‌ ಸಮಗ್ರ ಅಭಿವೃದ್ಧಿ  ಸಾಧ್ಯವಾಗುತ್ತದೆ ಎನ್ನುವುದು ಅವರ ಯೋಜನೆಯಾಗಿತ್ತು ಎಂದರು.

`ವಿಶ್ವೇಶ್ವರಯ್ಯ ಅವರ ಬದುಕು, ಸಾಧನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿದ ಕೊಡುಗೆ’ ಎಂಬ ವಿಷಯಕ್ಕೆ ಸಂಬಂಧಿಸಿ ವಿಶ್ರಾಂತ ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠ್ ಉಪನ್ಯಾಸ ನೀಡಿ, ಬ್ರಿಟಿಷ್‌ ಅಧಿಕಾರಿಗಳು ಬೆಚ್ಚಿ ಬೀಳುವಂತಹ ಪ್ರತಿಭೆ ವಿಶ್ವೇಶ್ವರಯ್ಯರಲ್ಲಿತ್ತು. ಬ್ರಿಟಿಷ್‌ ಸರ್ಕಾರದಿಂದಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು ಎಂದು ತಿಳಿಸಿದರು.

ಜಲ ವಿದ್ಯುತ್‌ ಯೋಜನೆ, ಕುಡಿಯುವ ನೀರಿನ ವ್ಯವಸ್ಥೆ, 1ಲಕ್ಷ 50 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ, ರೈಲ್ವೆ ಮಾರ್ಗ ವಿಸ್ತರಣೆ, ಮೈಸೂರು ಬ್ಯಾಂಕ್‌ ಸ್ಥಾಪನೆ, ಮಲೆನಾಡು ಸಂರಕ್ಷಣಾ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಕನ್ನಡ ನಾಡು, ನುಡಿಗೆ ಸರ್.ಎಂ.ವಿ ನೀಡಿದ ಕೊಡುಗೆ ಸ್ಮರಣೀಯ. ಅವರ ಜನ್ಮದಿನ ಆಚರಿಸಿದರೆ ಸಾಲದು. ಇಂದಿನ ಯುವ ಜನತೆ ಅವರ ಕ್ರಿಯಾಶೀಲತೆ, ಶಿಸ್ತುಬದ್ಧ‌ ಜೀವನ, ಕೆಲಸದಲ್ಲಿನ ಶ್ರದ್ಧೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ವಿಶ್ರಾಂತ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್‌. ಗುರುಮೂರ್ತಿ ಅವರಿಗೆ ಶ್ರೇಷ್ಠ ಇಂಜಿನಿಯರ್ ಎಂದು ಗುರುತಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ, ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಗೌರವ ಕಾರ್ಯದರ್ಶಿಗಳಾದ ಬಿ. ದಿಳ್ಯಪ್ಪ, ರೇವಣಸಿದ್ದಪ್ಪ ಸಂಘಟನಾ ಕಾರ್ಯದರ್ಶಿ ಪ್ರಕಾಶ್‌ ಜಿಗಳಿ ಮತ್ತಿತರರು ಇದ್ದರು.

error: Content is protected !!