ಜಗಳೂರು, ಸೆ. 26 – ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸಂಘದ ಕರೆಯ ಮೇರೆಗೆ ಇಂದು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ,’ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್ಗಳ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ಗ್ರಾಮಾಡಳಿತ ಕಛೇರಿಗಳಲ್ಲಿ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್, ಅಗತ್ಯ ಮೂಲ ಸೌಕರ್ಯಗಳನ್ನು ಪೂರೈಕೆ ಮಾಡಬೇಕು ಒತ್ತಾಯಿಸಿದರು.
ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿ ಮೂರು ವರ್ಷಗಳ ಸೇವಾವಧಿ ಪರಿಣಗಣಿಸಿ ಅಂತರ್ ಜಿಲ್ಲಾ ವರ್ಗಾವಣೆ ಅವಕಾಶ ಪರಿಷ್ಕೃತ ಆದೇಶದ ಮಾರ್ಗಸೂಚಿ ರಚಿಸಬೇಕು.ಆಯುಕ್ತಾಲಯದ ಅಡಿಯಲ್ಲಿ ಗ್ರಾಮಾಡಳಿತ ಅಧಿಕಾರಿಗಳ ಜೇಷ್ಟತೆಯನ್ನು ರಾಜ್ಯಮಟ್ಟದ ಜೇಷ್ಟತೆಯನ್ನಾಗಿಸಬೇಕು. ಮೊಬೈಲ್ ತಂತ್ರಾಂಶ ಕೆಲಸದ ವಿಚಾರದಲ್ಲಿ ಅಮಾನತುಪಡಿಸಿರುವ ಆದೇಶ ರದ್ದುಪಡಿಸಬೇಕು. ಸೇವಾ ಭದ್ರತೆ, ಮೇಲ್ದರ್ಜೆ, ಪ್ರಯಾಣ ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು’.
‘ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಬಿ. ನಾಗರಾಜ್ ಮಾತನಾಡಿ, ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿಗಳ ಸೇವಾ ಭದ್ರತೆ, ಪದೋನ್ನತಿ, ವರ್ಗಾವಣೆ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕಿದೆ ಎಂದು ತಿಳಿಸಿದರು.
ರಾಜಸ್ವ ನಿರೀಕ್ಷಕ ಧನಂಜಯ್, ಕೀರ್ತಿಕುಮಾರ್, ಡಿಟಿಓ ರೂಪ ಅವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಮಲ್ಲಿಕಾ ರ್ಜುನ್, ಪ್ರದೀಪ್, ಅವಿನಾಶ್, ಮಂಜುನಾಥ್, ಮಧು ಕುಮಾರ್, ಅಂಕುಶ್ ರೆಡ್ಡಿ, ಕೀರ್ತನ, ಕೋಟೆಪ್ಪ, ದುರುಗೇಶ್, ಪರಶುರಾಮ್, ಶಿವರಾಜ್ ಮುಂತಾದವರು ಭಾಗವಹಿಸಿದ್ದರು.