ಸಿದ್ಧಾರೂಢರ ಪುರಾಣ ಮಂಗಲೋತ್ಸವದಲ್ಲಿ ಶ್ರೀ ಯೋಗಾನಂದ ಸ್ವಾಮೀಜಿ ಅಭಿಮತ
ಮಲೇಬೆನ್ನೂರು, ಸೆ.11- ದಾನ, ಧರ್ಮ, ಪುಣ್ಯದ ಕೆಲಸಗಳನ್ನು ಮಾಡಿದಾಗ ನಮಗೆ ರಕ್ಷಣೆ ಸಿಗುತ್ತದೆ. ಪರೋಪಕಾರವೇ ನಮ್ಮನ್ನು ಕಾಪಾಡುತ್ತದೆ ಎಂದು ಯಲವಟ್ಟಿಯ ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.
ಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿರುವ ಶ್ರೀ ಗುರು ಸಿದ್ಧಾಶ್ರಮದಲ್ಲಿ ಶ್ರಾವಣ ಮಾಸದ ಬೆನಕನ ಅಮಾವಾಸ್ಯೆ ಮತ್ತು ಶ್ರೀ ಸದ್ಗುರು ಸಿದ್ಧಾರೂಢರ ಕಥಾಮೃತ ಮುಕ್ತಾಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮಾನವ ಜನ್ಮ ಅರಿವಿನ ಜೀವವಾಗಿದೆ. ಮಾನವನ ಜೀವನ ಸಾರ್ಥಕ ವಾಗಬೇಕಾದರೆ ಇದ್ದುದರಲ್ಲಿ ಸ್ವಲ್ಪ ದಾನ, ಧರ್ಮದ ಕಾರ್ಯಗಳನ್ನು ಮಾಡಿದರೆ ಉತ್ತಮ ಮನಸ್ಸು, ಆರೋಗ್ಯದಿಂದಿರಲು ಸಾಧ್ಯ ಎಂದರು. ಜೀವನದಲ್ಲಿ ಪ್ರತಿಯೊಬ್ಬರೂ ಸಿದ್ಧಾರೂಢರ ಪುರಾಣ ಕೇಳಿ ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದು ಯೋಗಾನಂದ ಸ್ವಾಮೀಜಿ ತಿಳಿಸಿದರು.
ಹೋತನಹಳ್ಳಿಯ ಸಿದ್ಧಾಶ್ರಮದ ಶ್ರೀ ಶಂಕರಾನಂದ ಸ್ವಾಮೀಜಿ ಮಾತನಾಡಿ, ಯಾವುದೇ ಕೆಲಸವನ್ನು ಪ್ರೀತಿ, ವಿಶ್ವಾಸದಿಂದ ಮಾಡಬೇಕು. ಗುರುವಿನಲ್ಲಿ, ದೇವರಲ್ಲಿ ಭಕ್ತಿ ಇರಬೇಕು. ಏನೇ ಪಡೆದಿದ್ದರು ಗುರುವಿನ, ದೇವರ ಯೋಗ ಇರುತ್ತದೆ. ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ಮತ್ತು ಈಡೇರುವುದಿಲ್ಲ. ಅದು ಭಗವಂತನ ಅನುಗ್ರಹದಿಂದ ಮಾತ್ರ ಸಾಧ್ಯ. ಬದುಕಿಸುವುದು ಬೆಳೆಸುವುದು ಎಲ್ಲಾ ದೇವರ ಮಹಿಮೆಯಿಂದ ಸಾಧ್ಯ ಎಂದರು.
ಹೊಳೆಸಿರಿಗೆರೆಯ ಆಧ್ಯಾತ್ಮಿಕ ಚಿಂತಕ ಡಿ. ಸಿದ್ದೇಶ್ ಮಾತನಾಡಿ, ಸತ್ಸಂಗ ಮಾಡಿದಾಗ ಮುಕ್ತಿ ಸಿಗುತ್ತದೆ. ಗುರುಗಳ ಮಾರ್ಗದರ್ಶನ ಇದ್ದಾಗ ತೃಪ್ತಿ ಲಭಿಸುತ್ತದೆ. ಕಾಲ ಇದ್ದಂಗೆ ಇದೆ. ಆದರೆ ಮನುಷ್ಯನ ಆಚಾರ ವಿಚಾರಗಳು ಬದಲಾಗಿವೆ. ಮನಸ್ಸು ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಶಾಂತಿ, ಸಮಾಧಾನ, ತಾಳ್ಮೆ ಇವುಗಳನ್ನು ಸಂಪಾದಿಸಿ ಕೊಳ್ಳಲು ಸತ್ಸಂಗದಂತಹ ಕಾರ್ಯಕ್ರಮ ಗಳು ಅತ್ಯವಶ್ಯಕ ವಾಗಿವೆ. ಮನುಷ್ಯ ತನ್ನ ಅಹಂಕಾರವನ್ನು ದೂರ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ನಿರಂತರವಾಗಿ ಒಳ್ಳೆಯ ವಿಚಾರಗಳನ್ನು ಮಾಡಿದಾಗ ಮಾತ್ರ ಮನುಷ್ಯ ಉತ್ತಮನಾಗಿರಲು ಸಾಧ್ಯ ಎಂದರು.
ಹೊಳೆಸಿರಿಗೆರೆ ಗ್ರಾಮದ ಮಾಗೋಡ ರೇವಣಸಿದ್ದಪ್ಪ ಅವರು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಿದ್ದರು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಜಿ.ಆಂಜನೇಯ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಬಿ.ವೀರಯ್ಯ, ಜಿಗಳಿ ಇಂದೂಧರ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ವಕೀಲ ನಂದಿತಾವರೆ ತಿಮ್ಮನಗೌಡ, ಕಾರಿಗನೂರು ಜಯದೇವಪ್ಪ, ಹಾರೆಗೊಪ್ಪದ ಫುಡ್ ಇನ್‌ಸ್ಪೆಕ್ಟರ್ ಶ್ರೀಧರ್, ನಿವೃತ್ತ ಶಿಕ್ಷಕರಾದ ಜಿ.ಬಸಪ್ಪ ಮೇಸ್ಟ್ರು, ಜಿಗಳಿಯ ಡಿ.ರವೀಂದ್ರಪ್ಪ, ಜಿ.ಆರ್.ನಾಗರಾಜ್, ಕೆ.ಎನ್.ಹಳ್ಳಿಯ ತಿಪ್ಪೇಶಪ್ಪ, ಜಿಗಳಿ ಪಿಎಸಿಎಸ್ ಸಿಇಓ ಎನ್.ಎನ್.ತಳವಾರ್, ಬಿ.ಸೋಮಶೇಖರ ಚಾರಿ, ಕುಂಬಳೂರು ವಾಸು, ಸದಾಶಿವ, ಹೊಳೆಸಿರಿಗೆರೆಯ ಐಗೂರು ಕರಿಬಸಪ್ಪ, ಮಾಳಗಿ ಮಲ್ಲೇಶಪ್ಪ, ಮಾಳಗಿ ಪರಮೇಶ್ವರಪ್ಪ, ಕೆ ಕೊಟ್ರಪ್ಪ, ಮಲ್ಲಾಡದ ಕೃಷ್ಣಪ್ಪ, ಯಲವಟ್ಟಿಯ ಹೊಸಮನಿ ಮಲ್ಲಪ್ಪ, ಕೆ ಮಂಜಪ್ಪ, ಹೊರಟ್ಟಿ ಕರಿಬಸಪ್ಪ, ಡಿ ರಾಜಪ್ಪ, ವೈ ಸುರೇಶ್ ಶೆಟ್ಟಿ, ಎ ಜಗದೀಶ್, ಆನಂದನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕುಂಬಳೂರಿನ ಕೆ. ಕುಬೇರಪ್ಪ ಭಕ್ತಿ ಗೀತೆ ಹಾಡಿದರು. ಯಲವಟ್ಟಿ ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು.