ಹರಿಹರ,ಸೆ.8- ನಗರದ ಆರೋಗ್ಯ ಮಾತೆ ಬಸಲಿಕ ಚರ್ಚ್ ಮಾತೆ ಮೇರಿಯಮ್ಮನ ರಥೋತ್ಸವ ಶ್ರದ್ಧಾ-ಭಕ್ತಿ, ಸಡಗರ – ಸಂಭ್ರಮದಿಂದ ನಡೆಯಿತು.
ಆರೋಗ್ಯ ಮಾತೆಯ ಚರ್ಚ್ ನಲ್ಲಿ ಬೆಳಗಿನ ಜಾವದಿಂದ ಸಂಜೆಯವರೆಗೆ ಕ್ರೈಸ್ತ ಧರ್ಮದ ಅನುಸಾರವಾಗಿ ಅನೇಕ ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ವಿವಿಧ ಭಾಷೆಯಲ್ಲಿ ವಿಶೇಷ ಪೂಜೆ, ಆರಾಧನೆ ಸೇರಿದಂತೆ ಹಲವು ಬಗೆಯ ಪೂಜಾ ಕಾರ್ಯಗಳು ನಡೆದವು.
ಸೇವಂತಿಗೆ ಹೂವಿನಿಂದ ಅಲಂಕರಿಸಿದ ರಥೋತ್ಸವದಲ್ಲಿ ಮಾತೆ ಮೇರಿಯಮ್ಮನನ್ನು ಪ್ರತಿಷ್ಠಾಪಿಸಿ, ನಾಡಿನಾದ್ಯಂತದಿಂದ ಆಗಮಿಸಿದ ಭಕ್ತರ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಾಡಿನ ವಿವಿಧ ನಗರಗಳಿಂದ ಆಗಮಿಸಿದ ಕ್ರೈಸ್ತ ಧರ್ಮದ ಭಕ್ತರು ರಥೋತ್ಸವದ ಮೇಲೆ ಹೂವು, ಕಲ್ಲು ಸಕ್ಕರೆ, ಬಾದಾಮಿ ಹಾಕುವುದರ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ರಥೋತ್ಸವದ ಮೆರವಣಿಗೆಯಲ್ಲಿ ಬ್ಯಾಂಡ್ ಸೆಟ್, ಭಜನಾ ಮೇಳಗಳು, ಜೊತೆಗೆ ಧರ್ಮ ಸಂದೇಶಗಳನ್ನು ಬಿತ್ತರಿಸುವ ಕಾರ್ಯಗಳನ್ನು ಮಾಡಲಾಯಿತು.
ಆರೋಗ್ಯ ಮಾತೆಗೆ ದೀಡ್ ನಮಸ್ಕಾರ, ಹರಕೆ ಸಲ್ಲಿಸಿದ ಭಕ್ತರು
ಹರಿಹರ, ಸೆ.8- ನಗರದ ಆರೋಗ್ಯ ಮಾತೆಯ ಬಸಲಿಕ ಚರ್ಚ್ನಲ್ಲಿ ನಡೆಯುತ್ತಿರುವ ಮಾತೆ ಮೇರಿಯಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ಕ್ರೈಸ್ತ ಧರ್ಮದ ಭಕ್ತರು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ನದಿಯ ದಡದಿಂದ ಆರೋಗ್ಯ ಮಾತೆಯ ಚರ್ಚಿನವರಗೂ ದೀಡ್ ನಮಸ್ಕಾರ ಹಾಕಿ, ಮತ್ತು ತಲೆ ಕೂದಲು ಹರಕೆಯನ್ನು ತೀರಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಮೆರವಣಿಗೆ ಆರೋಗ್ಯ ಮಾತೆಯ ಚರ್ಚ್ನಿಂದ ಪ್ರಾರಂಭಗೊಂಡು, ಹಳೆ ಪಿ.ಬಿ. ರಸ್ತೆ, ಟಿ.ಬಿ. ರಸ್ತೆಯ ಮೂಲಕ ಹಾದು, ತೇರುಗಡ್ಡೆಯಲ್ಲಿರುವ ಮೂಲ ಚರ್ಚ್ಗೆ ಭೇಟಿ ಕೊಟ್ಟು, ಅಲ್ಲೂ ಕೂಡ ಪ್ರಾರ್ಥನೆ ಸಲ್ಲಿಸಿ, ನಂತರ ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪುನಃ ಆರೋಗ್ಯ ಮಾತೆಯ ಚರ್ಚ್ ಆವರಣದಲ್ಲಿ ಅಂತ್ಯಗೊಂಡಿತು.
ನಾಡಿನಾದ್ಯಂತ ಆಗಮಿಸಿದ ಕ್ರೈಸ್ತ ಭಕ್ತರು ತಲೆ ಕೂದಲು ತೆಗೆಸಿ, ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ, ಅಲ್ಲಿಂದ ಚರ್ಚ್ ನವರಿಗೆ ದೀಡ್ ನಮಸ್ಕಾರ ಹಾಕಿ, ಮಾತೆಗೆ ಹೂವು, ಹಣ್ಣು-ಕಾಯಿ, ಮೇಣದ ಬತ್ತಿಯನ್ನು ಭಕ್ತಿಯಿಂದ ಅರ್ಪಣೆ ಮಾಡು ವುದರೊಂದಿಗೆ ಆರೋಗ್ಯ ಮಾತೆಯ ಆಶೀರ್ವಾದ ಪಡೆದುಕೊಂಡರು.
ನಿನ್ನೆಯಿಂದ ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಚರ್ಚ್ ಆವರಣ, ನಗರಸಭೆ ಆವರಣ, ಜಿ.ಬಿ.ಎಂ.ಎಸ್. ಶಾಲೆ ಆವರಣ, ಮೈದಾನ ಸೇರಿದಂತೆ ರಸ್ತೆಯ ಪಕ್ಕದಲ್ಲಿ ವಾಸ್ತವ್ಯ ಹೂಡಿದ್ದರು.
ಈ ವೇಳೆ ಫಾ. ಕೆ.ಎ. ಜಾರ್ಜ್ ಮಾತನಾಡಿ, ಯೇಸುವಿನ ತ್ಯಾಗ, ಬಲಿದಾನ ಮಾದರಿಯಾಗಬೇಕು. ಆರೋಗ್ಯ ಮಾತೆಯ ಸಂದೇಶಗಳನ್ನು, ಪರಸ್ಪರ ಪ್ರೀತಿಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.