ದಾವಣಗೆರೆ, ಸೆ.7 – ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಪರಿಸರ ಸ್ನೇಹಿ 12 ಅಡಿ ಎತ್ತರದ ಪೇಪರ್ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ವಿದ್ಯಾರ್ಥಿಗಳ ಸಹಾಯದಿಂದ ಶಾಲೆಯ ಚಿತ್ರಕಲಾ ಶಿಕ್ಷಕರಾದ ಪ್ರಶಾಂತ್ ಕುಮಾರ್, ಸ್ವಾತಿ, ಹೀನ ಕೌಸರ್, ಮುಜಸ್ಸಿಂ, ಸಹನಾ ಹಾಗೂ ಶಾಲಾ ಮಕ್ಕಳ ಕೈ ಚಳಕದಲ್ಲಿ ಮೂಡಿಬಂದಿರುವ ಈ ಗಣಪನನ್ನು ಸಂಪೂರ್ಣವಾಗಿ ಕಾಗದ, ಮೈದಾ ಅಂಟು ಮತ್ತು ಇದ್ದಿಲಿನ ಪುಡಿಯಿಂದ ನಿರ್ಮಿಸಲಾಗಿದೆ.
ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗಾಂಧಿ ವೃತ್ತದಿಂದ ರಥದಲ್ಲಿ ಕೂರಿಸಿ ಅಶೋಕ ರಸ್ತೆ, ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನ ಸರ್ಕಲ್ ಮೂಲಕ ಮೆರವಣಿಗೆಯಲ್ಲಿ ತಂದು ಶಾಲೆಯ ಸುಂದರ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.
ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ಗಣಪನ ಭಕ್ತಿ ಪ್ರಧಾನ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ನಡುನಡುವೆ ಘೋಷಣೆ ಕೂಗಿದರು.
ಸಂಸ್ಥೆಯ ನಿರ್ದೇಶಕ ಡಾ. ಜಯಂತ್, ಕಾರ್ಯದರ್ಶಿ ಡಿ. ಎಸ್. ಹೇಮಂತ್, ಸಂಸ್ಥೆಯ ಮುಖ್ಯಸ್ಥೆ ಡಾ ಜಸ್ಟಿನ್ ಡಿ ಸೌಜ ಈ ಸಂದರ್ಭದಲ್ಲಿದ್ದರು.