ಹೊನ್ನಾಳಿ ಸರ್ಕಾರಿ ಮುಸ್ಲಿಂ ನೌಕರರ ಸಂಘದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್
ಹೊನ್ನಾಳಿ,ಜ.10- ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಣ್ಣು ಮಕ್ಕಳನ್ನು ಪಿ.ಯು.ಸಿಗೆ ಬರುತ್ತಿದ್ದಂತೆ ಶಾಲೆ ಬಿಡಿಸಿ ಮದುವೆ ಮಾಡಿ ಕಳುಹಿಸುವುದೇ ಸಾಮಾನ್ಯವಾಗಿದ್ದು, ಈ ಪರಿಸ್ಥಿತಿ ಬದಲಾಗಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೋಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದರು.
ಪಟ್ಟಣದ ಶಾದಿಮಹಲ್‍ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘ, ಹೊನ್ನಾಳಿ ಘಟಕ ಹಾಗೂ ಜಾಮೀಯಾ ಮಸ್ಜಿದ್ ಇವರ ಸಂಯುಕ್ತಾಶ್ರಯದಲ್ಲಿ, 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿ.ಯ.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಧಿಕಾರಿಗಳಿಗೆ ಬೀಳ್ಕೊಡುಗೆ, ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಧನಸಹಾಯ ಹಾಗೂ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ಇನ್ನು ಮುಸ್ಲಿಂ ಸಮುದಾಯದಲ್ಲಿ ಶ್ರಮಿಕ ವರ್ಗವೇ ಹೆಚ್ಚಾಗಿರುವುದರಿಂದ ಸಮಾಜ ಬಾಂಧವರು ವರದಕ್ಷಿಣೆ ಪಿಡುಗಿನಿಂದ ದೂರವಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಶಿಕ್ಷಣಕ್ಕೆ ಕೇವಲ ಒಬ್ಬ ವ್ಯಕ್ತಿಯ ಬದುಕನ್ನಲ್ಲ, ಇಡೀ ಕುಟುಂಬ ಮತ್ತು ಸಮಾಜವನ್ನು ರೂಪಿಸುವ ಶಕ್ತಿ ಇದೆ ಎಂದು ಹೇಳಿದರು.
ಬರೆಯುವ ಪೆನ್ನಿಗಿರುವಷ್ಟು ಶಕ್ತಿ ಕತ್ತರಿಸುವ ಕತ್ತಿಗೆ ಇರುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕುಗಳನ್ನಾಗಿ ಮಾಡಿಕೊಂಡು ಬರಲಾಗುತ್ತಿದ್ದು, ನಾನೆಂದೂ ಓಲೈಕೆಯ ರಾಜಕಾರಣ ಮಾಡಲಾರೆ ಎಂದು ಹೇಳಿದರು.
ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉಮ್ಮತ್ ಆಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಿಮ್ಮೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ರಫಿವುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಭಾರಿ ಬಿ.ಇ.ಓ ತಿಪ್ಪೇಶಪ್ಪ, ಜಿಲ್ಲಾ ವಕ್ಫ್ ಅಧಿಕಾರ ಸೈಯದ್ ಮೌಜಂ
ಪಾಷಾ, ನಿಕಟಪೂರ್ವ ಅಧಿಕಾರಿ ಸಲೀಂ ಪಾಷಾ, ಉರ್ದು ಶಿಕ್ಷಣ ಸಂಯೋಜಕಿ ಶಂಷಾದ್ ಬೇಗಂ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಶಹಜಾನ್, ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಕೆ. ಅರುಣ್, ಎಸ್.ಡಿ.ಎಂ.ಸಿ. ಸಮನ್ವಯ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ್ ದೊಂಕತ್ತಿ ಸ್ವಾಗತಿಸಿದರು.