ಹರಿಹರದಲ್ಲಿನ ಶ್ರೀ ಅಮೃತೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ದತ್ತಾತ್ರೇಯ ಭಟ್ಟರ ಪ್ರತಿಪಾದನೆ
ಹರಿಹರ, ಅ.13- ಪ್ರತಿ ನಿತ್ಯ ಶಿವನನ್ನು ಆರಾಧನೆ ಮಾಡಿದರೆ ಆರೋಗ್ಯ, ಐಶ್ವರ್ಯ, ಆಯುಷ್ಯ, ಮನಃಶ್ಯಾಂತಿ ಪ್ರಾಪ್ತಿಯಾಗುತ್ತದೆ ಎಂದು ಜೋಯಿಸ ರಾದ ದತ್ತಾತ್ರೇಯ ಭಟ್ಟರು ಪ್ರತಿಪಾದಿಸಿದರು.
ನಗರದ ದೇವಸ್ಥಾನ ರಸ್ತೆಯ ಕಾಳಮ್ಮ ದೇವಸ್ಥಾನ ಪಕ್ಕದ ಶ್ರೀ ಅಮೃತೇಶ್ವರ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಇಂದು ಹೋಮ, ಹವನ ಪೂಜಾ ಕಾರ್ಯವನ್ನು ನೆರವೇರಿಸಿ ಅವರು ಮಾತನಾಡಿದರು.
ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದರಿಂದ ಮನಸ್ಸಿನಲ್ಲಿನ ಅಂಧಕಾರ ತೊಲಗಿ ಹಣ, ಐಶ್ವರ್ಯ, ಆಯುಷ್ಯ ವೃದ್ಧಿಯಾಗಿ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಬರಲಿಕ್ಕೆ ಸಾಧ್ಯವಿಲ್ಲ. ಪ್ರಾತಃ ಕಾಲದಲ್ಲಿ ಶಿವನ ಆರಾಧನೆ ಮಾಡಿದರೆ ಪಾಪಗಳು ತೊಲಗುತ್ತವೆ. ಮಧ್ಯಾಹ್ನ ಆರಾಧನೆ ಮಾಡಿದರೆ ಜನ್ಮದ ಪಾಪ ತೊಲಗುತ್ತವೆ. ಸಂಜೆ ಆರಾಧನೆ ಮಾಡಿದಾಗ ಪೂರ್ವ ಜನ್ಮದ ಪಾಪಗಳು ತೊಲಗುತ್ತವೆ ಎಂದು ಅವರು ವಿಶ್ಲೇಷಿಸಿದರು.
ಹರಿಹರ ನಗರ ಪಂಚಲಿಂಗ ಕ್ಷೇತ್ರವಾಗಿದೆ. ನೂರ ಎಂಟು ಲಿಂಗೇಶ್ವರ, ಸಂಗಮೇಶ್ವರ, ಅಡಿಕೇಶ್ವರ, ಜೋಡು ಬಸವೇಶ್ವರ, ಅಮೃತೇಶ್ವರ ಐದು ಶಿವಲಿಂಗಗಳೂ ಸಹ ಒಂದೊಂದು ರೀತಿಯಲ್ಲಿ ಮಹತ್ವ ಪಡೆದಿವೆ. ಅದರಂತೆ ನಾಳೆ ಪ್ರತಿಷ್ಟಾಪನೆಯಾಗುತ್ತಿರುವ ಅಮೃತೇಶ್ವರ ಸ್ವಾಮಿ ಸಹ ತನ್ನದೇ ಆದ ಇತಿಹಾಸ ಹೊಂದಿರುವ ದೇವರಾಗಿದೆ ಎಂದು ಹೇಳಿದರು.
ಅಮೃತೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಸದಾಶಿವ ಬೊಂಗಾಳೆ ಮಾತನಾಡಿ, ಅನೇಕ ವರ್ಷಗಳ ಹಿಂದೆ ಅಮೃತೇಶ್ವರ ದೇವಸ್ಥಾನ ಬಹಳ ಚಿಕ್ಕ ಮೂರ್ತಿ ಹೊಂದಿತ್ತು. ಅದು ಕೂಡ ಇತ್ತೀ ಚೆಗೆ ಶಿಥಿಲವಾಗಿತ್ತು. ಈ ಮೂರ್ತಿಯನ್ನು ಹಿಂದಿನ ಕಾಲದಲ್ಲಿ ಬೊಂಗಾಳೆ ಕುಟುಂಬದ ಸದಸ್ಯರು ಭಕ್ತಿಯಿಂದ ಆರಾಧಿಸುತ್ತಾ ಬಂದಿದ್ದಾರೆ. ಸುಬ್ಬಣ್ಣ ಎಂಬುವರ ಕನಸಿನಲ್ಲಿ ದೇವರು ಬಂದು ಅಮೃತೇಶ್ವರ ದೇವರ ಮೂರ್ತಿಯನ್ನು ನಿರ್ಮಿಸಿ ಎಂಬುದರ ಬಗ್ಗೆ ವಾಣಿ ನುಡಿಸಿದ ಪರಿಣಾಮ ಬೊಂಗಾಳೆ ಕುಟುಂಬದ ಸದಸ್ಯರೆಲ್ಲರನ್ನು ಒಗ್ಗೂಡಿಸಿ ಹೊಸದಾಗಿ ಅಮೃತೇಶ್ವರ ಮೂರ್ತಿಯನ್ನೂ ಪ್ರತಿಷ್ಠಾಪಿಸುವ ಕಾರ್ಯ ಮಾಡಲಾಗಿದೆ. ಇಲ್ಲಿನ ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ನೀಡಿದ ಬೊಂಗಾಳೆ ಶೇಷಪ್ಪ ದೇವುಬಾಯಿ ಇವರ ಜ್ಞಾಪಕಾರ್ಥವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬೊಂಗಾಳೆ ಸುಬ್ಬಣ್ಣ, ಬೈರಪ್ಪ, ಕಾಳಪ್ಪ ಇವರು ತಮ್ಮ ಅತ್ಯಮೂಲ್ಯವಾದ ಸೇವೆ ಮಾಡಿದ್ದಾರೆ ಎಂದು ಹೇಳಿದರು.
ಬೊಂಗಾಳೆ ಕಾಳಪ್ಪ ಮಾತನಾಡಿ, ಅಮೃತೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಸಹಕಾರ ಪಡೆಯದೇ, ಬೊಂಗಾಳೆ ಕುಟುಂಬದ ಸದಸ್ಯರಿಂದ ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ರಾಘವೇಂದ್ರ ಬೊಂಗಾಳೆ ಮಾತನಾಡಿ, ಅಮೃತೇಶ್ವರ ಸ್ವಾಮಿಗೆ ನಾಳೆ ದಿನಾಂಕ 14 ರ ಬುಧವಾರ ಮುಂಜಾನೆಯಿಂದ ಹೋಮ, ಬಲಿಹರಣ, ಪ್ರಾಣ ಪ್ರತಿಷ್ಟಾಪನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಕಲಶ ಸ್ಥಾಪನೆಯನ್ನು ಚಿತ್ರದುರ್ಗದ ಸದ್ಗುರು ಶ್ರೀ ಶಿವಲಿಂಗಾನಂದ ಸ್ವಾಮೀಜಿ ನೆರವೇರಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದ್ವಾರಕನಾಥ ಬೊಂಗಾಳೆ, ಅರುಣ್ ಕುಮಾರ್ ಬೊಂಗಾಳೆ, ಜ್ಞಾನೇಶ್ವರ ಬೊಂಗಾಳೆ, ಡಾ. ಸಚ್ಚಿನ್ ಬೊಂಗಾಳೆ, ನಂದಕುಮಾರ್ ಖಟಾವ್ಕರ್, ಗಿರಿಜಾ ಖಟಾವ್ಕರ್, ಹರಿ ಪ್ರಸಾದ್, ಸುಭಾಷ್ ಬೊಂಗಾಳೆ, ಪ್ರತೀಕ ಬೊಂಗಾಳೆ, ಅನ್ನಪೂರ್ಣ ಮಹೇಂದ್ರಕರ್, ಸುರೇಖಾ ಅರುಣ್ ಬೊಂಗಾಳೆ, ಅನಸೂಯಾ, ಶಶಿಕಲಾ, ಪದ್ಮಾವತಿ ಸುಭಾಷ್ ಬೊಂಗಾಳೆ, ಪರಶುರಾಮ್ ಹಾಗೂ ಇತರರು ಹಾಜರಿದ್ದರು.