ಮಲೇಬೆನ್ನೂರು, ಆ.4- ಬತ್ತಿ ಬರಿದಾಗಿದ್ದ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಯ 97 ಎಕರೆ ವಿಸ್ತೀರ್ಣದ ಐತಿಹಾಸಿಕ ಕೆರೆಗೆ ಕಳೆದ ವಾರ ನಿರಂತರವಾಗಿ ಬಂದ ಮಳೆಯಿಂದಾಗಿ ಗುಡ್ಡದಲ್ಲಿರುವ ಮಿಂಚುಳ್ಳಿ ಜಲಪಾತ ಮತ್ತು ಮುದ್ದಪ್ಪನ ಕೆರೆಯಿಂದ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿತ್ತು. ಇದೀಗ ಕೆರೆ ಸಮೀಪ ಇರುವ ಭದ್ರಾ ನಾಲೆಯಿಂದ ಪಂಪ್ ಸೆಟ್ ಮೂಲಕ ಕೆರೆಗೆ ಭಾನುವಾರದಿಂದ ನೀರು ಹರಿಸಲಾಗುತ್ತಿದೆ. ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಸದ್ಯ ನೀರಿನ ಬೇಡಿಕೆ ಇಲ್ಲದ ಕಾರಣ ಕೊಮಾರನಹಳ್ಳಿ ಗ್ರಾಮಸ್ಥರು ನಾಲೆಗೆ ಪಂಪ್ಸೆಟ್ಗಳನ್ನು ಇಟ್ಟು 3 ಪೈಪ್ಗಳ ಮೂಲಕ ಕೆರೆಗೆ ನೀರು ಹರಿಸುವ ಕೆಲಸ ಆರಂಭಿಸಿದ್ದಾರೆ. ಏತನ್ಮಧ್ಯೆ ಬೆನಕನಹಳ್ಳಿ ಏತ ನೀರಾವರಿ ಯೋಜನೆಯಿಂದಲೂ ಈ ತಿಂಗಳಲ್ಲೇ ಕೆರೆಗೆ ನೀರು ಹರಿಯುವ ಸಾಧ್ಯತೆ ಇದ್ದು, ಅದು ಸಾಕಾರಗೊಂಡರೆ ಈ ವರ್ಷ ನಮ್ಮ ಕೆರೆ ಭರ್ತಿ ಆಗಲಿದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
January 10, 2025