ಜಗಳೂರು, ಜು. 31 – ತಾಲ್ಲೂಕಿನ ಸಂತೆ ಮುದ್ದಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 50 ವರ್ಷದ ಜಿ. ನಾಗಮ್ಮ ತನ್ನ ಪತಿಯಿಂದಲೇ ಕೊಲೆಯಾಗಿರುವ ಘಟನೆ ವರದಿಯಾಗಿದೆ.
ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಪತಿ ಸತ್ಯಪ್ಪ ತನ್ನ ಪತ್ನಿ ಶಿಕ್ಷಕಿ ಜಿ. ನಾಗಮ್ಮ ಅಕ್ರಮ ಸಂಬಂಧ ಹೊಂದಿರುತ್ತಾಳೆ ಎಂದು ಅನುಮಾನಗೊಂಡು ಮಲಗಿರುವ ಹಾಸಿಗೆಯಲ್ಲಿ ಇಂದು ಬೆಳಗಿನ ಜಾವ ಕೊಲೆ ಮಾಡಿ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಇದೀಗ ವ್ಯಕ್ತಿಯು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಶಿಕ್ಷಕಿ ನಾಗಮ್ಮ ಮತ್ತು ಸತ್ಯಪ್ಪ ಇವರು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿ ನಡುವೆ ಇತ್ತೀಚೆಗೆ ಆಗಾಗ ಜಗಳ ಶುರುವಾಗಿತ್ತು. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಹಿನ್ನೆಲೆಯಲ್ಲಿ ಪತಿ ಪತ್ನಿಯನ್ನು ಕೊಲೆಗೈದಿದ್ದಾನೆ ಎಂಬ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಅಡಿಷನಲ್ ಎಸ್.ಪಿ. ಮಂಜುನಾಥ, ಡಿ.ವೈ.ಎಸ್.ಪಿ. ಬಸವರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಲೆಗೀಡಾದ ಶಿಕ್ಷಕಿ ನಾಗಮ್ಮನ ಪತಿಯೇ ಡೆತ್ ನೋಟ್ ಬರೆದು ವಿಷ ಸೇವಿಸಿರುವುದಾಗಿ ತಿಳಿದು ಬಂದಿದೆ.