ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸದಸ್ಯರಿಗೆ ಶೇ. 18ರಷ್ಟು ಲಾಭಾಂಶ – ಮುರುಗೇಶ್ ಆರಾಧ್ಯ, ಬ್ಯಾಂಕ್ ಅಧ್ಯಕ್ಷ
ದಾವಣಗೆರೆ, ಜು.29- ಜಿಲ್ಲೆಯ ಸಹಕಾರ ಬ್ಯಾಂಕುಗಳಲ್ಲೇ ಹೊಸ ಆವಿಷ್ಕಾರದ ಬ್ಯಾಂಕಿಂಗ್ ಸೇವೆ ಒದಗಿಸುವಲ್ಲಿ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಪ್ರಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎ. ಮುರುಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ತ್ರಿಶೂಲ್ ಕಲಾ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ 52ನೇ ವರ್ಷದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸ ತಂತ್ರಾಂಶ ಯುಪಿಐ ಪ್ಲಾಟ್ ಫಾರಂ ಅನ್ನು ಜಾರಿಗೆ ತಂದ ದಾವಣಗೆರೆ ಜಿಲ್ಲೆಯ ಪ್ರಪ್ರಥಮ ಅರ್ಬನ್ ಸಹಕಾರಿ ಬ್ಯಾಂಕ್ ಆಗಿದೆ. ಜೊತೆಗೆ ತಾಂತ್ರಿಕತೆಯ ಅಳವಡಿಕೆಯಲ್ಲೂ ತಮ್ಮ ಬ್ಯಾಂಕ್ ಕಾರ್ಯ ಪ್ರವೃತ್ತ ವಾಗಿದೆ ಎಂದು ತಿಳಿಸಿದ ಅವರು, ಗ್ರಾಹಕರಿಗೆ ಇನ್ನೂ ಅತ್ಯುತ್ತಮ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ನಿರಂತರ ಪರಿಶ್ರಮದಲ್ಲಿದ್ದೇವೆ ಎಂದು ಹೇಳಿದರು.
ಸಹಕಾರ ಕ್ಷೇತ್ರದ ಮೂಲ ಅಪೇಕ್ಷೆಗಳ ಜೊತೆಯಲ್ಲಿಯೇ ಆಧುನಿಕ ಕಾಲದ ಅಪೇಕ್ಷೆಗಳನ್ನೂ ಈಡೇರಿಸುವ ಮಹತ್ತರವಾದ ಜವಾಬ್ಧಾರಿ ಸಹಕಾರ ಬ್ಯಾಂಕುಗಳ ಮೇಲಿದೆ. ಸಹಕಾರ ಕ್ಷೇತ್ರ ಮತ್ತೆ ದೇಶದ ಆರ್ಥಿಕತೆಯ ಕೇಂದ್ರ ಬಿಂದುವನ್ನಾಗಿಸುವ ಪ್ರಯತ್ನಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ರಚಿಸಿದೆ ಎಂದರು.
ಕೇವಲ ವ್ಯವಹಾರಿಕ ಅಂಕಿ – ಅಂಶಗಳ ಆಧಾರದ ಸಾಮರ್ಥ್ಯ, ಸದೃಢತೆ ಹಾಗೂ ಬೆಳವಣಿಗೆಯ ಮಾಪನದಿಂದ ಆರ್ಥಿಕ ಕ್ಷೇತ್ರ ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರ ಬಹುದೂರ ಸಾಗಿದೆ. ತಾಂತ್ರಿಕ ಸಾಮರ್ಥ್ಯ, ಡಿಜಿಟಲ್ ಸುರಕ್ಷತೆ, ಅನುತ್ಪಾದಕ ಆಸ್ತಿಗಳ ವರ್ಗೀಕರಣ, ಸಿಬ್ಬಂದಿಗಳ ಕೌಶಲ್ಯ, ಆಡಳಿತ ಮಂಡಳಿಯ ಸಂಯೋಜನೆ, ವ್ಯವಸ್ಥಾಪನಾ ಮಂಡಳಿ ರಚನೆ ಹೀಗೆ ಹಲವು ಬಗೆಯ ಹೊಸ ಮಾಪಕಗಳ ಮೂಲಕ ಇಂದು ಬ್ಯಾಂಕುಗಳ ಸಾಮರ್ಥ್ಯವನ್ನು ಅಳೆಯಲಾಗುತ್ತದೆ ಎಂದು ಸಹಕಾರ ಕ್ಷೇತ್ರದ ಮಹತ್ವವನ್ನು ಅವರು ವಿಶ್ಲೇಷಿಸಿದರು.
ತಮ್ಮ ಬ್ಯಾಂಕಿನ ಪ್ರಗತಿಯನ್ನು ಪ್ರಸ್ತಾಪಿಸಿದ ಮುರುಗೇಶ್, ಈ ಬ್ಯಾಂಕಿನ ಪ್ರಧಾನ ಕಚೇರಿಯೂ ಸೇರಿದಂತೆ, ಎಲ್ಲಾ ಹತ್ತೂ ಶಾಖೆಗಳು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಶಾಖೆಗೆ ಅನುಮತಿ ನೀಡಿದ್ದು, ಶಾಮನೂರು ರಸ್ತೆಯಲ್ಲಿ ಶೀಘ್ರ ಹೊಸ ಶಾಖೆಯನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
2024, ಮಾರ್ಚ್ ಅಂತ್ಯಕ್ಕೆ ತಮ್ಮ ಬ್ಯಾಂಕ್ 11,396 ಸದಸ್ಯರನ್ನು ಹೊಂದಿದ್ದು, 6.15 ಕೋಟಿ ರೂ.ಗಳಷ್ಟು ಷೇರು ಬಂಡವಾಳ ಇದೆ. 60.25 ಕೋಟಿ ರೂ.ಗಳು ಕಾಯ್ದಿಟ್ಟ ಮತ್ತು ಇತರೆ ನಿಧಿಗಳಾಗಿದ್ದು, ಇದಕ್ಕೆ ಈ ವರ್ಷದ ಲಾಭ ವಿಂಗಡಣೆಯಾದ ನಂತರ ಅಂದಾಜು ರೂ. 65 ಕೋಟಿಗಳಷ್ಟು ನಿಧಿ ಏರಿಕೆಯಾಗುವುದಾಗಿ ವಿವರಿಸಿದರು. ಈ ಎಲ್ಲಾ ಅಂಕಿ – ಅಂಶಗಳನ್ನು ಅವಲೋಕಿಸಿದಾಗ ಸ್ವಂತ ಬಂಡವಾಳ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದ ಬ್ಯಾಂಕ್ ಸುಭದ್ರ ಮತ್ತು ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ವರ್ಷಾಂತ್ಯಕ್ಕೆ 352.03 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಇದು ಕಳೆದ ಸಾಲಿಗಿಂತ ಶೇ. 9.81ರಷ್ಟು ಹೆಚ್ಚಾಗಿದೆ. 287.62 ಕೋಟಿ ರೂ.ಗಳಷ್ಟು ಸಾಲ ಮತ್ತು ಮುಂಗಡಗಳಾಗಿವೆ. ಸಾಲದ ಉದ್ದೇಶವನ್ನು ಮುಖ್ಯವಾಗಿ ಗಮನಿಸಿ, ಪ್ರಾಮುಖ್ಯತೆಗನುಗುಣವಾಗಿ ಉತ್ಪಾದನಾ ಉದ್ದೇಶಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಆದ್ಯತಾ ವಲಯಕ್ಕೆ 222.04 ಕೋಟಿ ರೂ.ಗಳಷ್ಟು ಸಾಲ ಸೌಲಭ್ಯ ನೀಡಲಾಗಿದೆ. ದುರ್ಬಲ ವರ್ಗ ಮತ್ತು ಮಹಿಳೆಯರಿಗೆ 34.42 ಕೋಟಿ ರೂ.ಗಳಷ್ಟು ಸಾಲ ಒದಗಿಸಲಾಗಿದೆ. ದುರ್ಬಲ ವರ್ಗದವರು, ಸಣ್ಣ-ಪುಟ್ಟ ವ್ಯಾಪಾರಿಗಳಿಗೆ, ಸಣ್ಣ ಕೈಗಾರಿಕೆಗಳಿಗೆ, ಶೈಕ್ಷಣಿಕ ಸಾಲಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸುಸ್ತಿ ಬಾಕಿ ಪ್ರಮಾಣವು ಶೇ. 3.27ರಷ್ಟಿದ್ದು, ನಿವ್ವಳ ಅನುತ್ಪಾದಿತ ಆಸ್ತಿಯ ಪ್ರಮಾಣ ಶೇ. 0.38 ಇರುತ್ತದೆ. ಇದು ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಭದ್ರತೆ, ವಿವಿಧ ಬ್ಯಾಂಕುಗಳ ಖಾಯಂ ಠೇವಣಿಗಳಲ್ಲಿ ಲಾಭದಾಯಕವಾಗಿ ತೊಡಗಣೆ ಮಾಡಲಾಗಿದ್ದು, ವರದಿ ಸಾಲಿನಲ್ಲಿ 94.87 ಕೋಟಿ ರೂ. ಹೂಡಿಕೆ ಮಾಡಲಾಗಿದೆ. 5.86 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಇದು ಕಳೆದ ವರ್ಷಕ್ಕಿಂತ 33 ಲಕ್ಷ ರೂ. ಹೆಚ್ಚಾಗಿರುತ್ತದೆ ಎಂದು ಬ್ಯಾಂಕಿನ ಪ್ರಗತಿಯನ್ನು ಅಂಕಿ-ಅಂಶಗಳೊಂದಿಗೆ ಅವರು ಸಭಿಕರಿಗೆ ವಿವರಿಸಿದರು.
ಬ್ಯಾಂಕಿನ ಸದಸ್ಯರಿಗೆ ಶೇ. 18 ರಷ್ಟು ಲಾಭಾಂಶ ನೀಡಲು ತಮ್ಮ ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ಮುರುಗೇಶ್ ಅವರು ಷೇರುದಾರರ ಚಪ್ಪಾಳೆಗಳ ಮಧ್ಯೆ ಘೋಷಿಸಿದರು.
ಕಳೆದ 7 ವರ್ಷಗಳ ಅವಧಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಬ್ಯಾಂಕಿನ 430 ಸದಸ್ಯರ ಚಿಕಿತ್ಸೆಗಾಗಿ 54 ಲಕ್ಷ ರೂ. ಹಾಗೂ ಇದೇ ಅವಧಿಯಲ್ಲಿ ನಿಧನರಾದ 734 ಸದಸ್ಯರಿಗೆ ತಲಾ 10 ಸಾವಿರ ರೂ.ಗಳಂತೆ 70 ಲಕ್ಷ ರೂ.ಗಳನ್ನು ಮರಣೋತ್ತರ ಪರಿಹಾರವಾಗಿ ನೀಡಲಾಗಿದೆ. ಅಲ್ಲದೇ, ಬ್ಯಾಂಕಿನ ಉತ್ತಮ ಸೇವೆಗಾಗಿ ಶ್ರಮಿಸುತ್ತಿರುವ ಸಿಬ್ಬಂದಿ ಮತ್ತು ಅವರ ಕುಟುಂಬದವರ ವಿಮಾ ಸೌಲಭ್ಯಕ್ಕಾಗಿ 12.45 ಲಕ್ಷ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.
ತಮ್ಮ ಬ್ಯಾಂಕಿನ ಪ್ರಗತಿಯಲ್ಲಿ ಅನೇಕರು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಅವರೆಲ್ಲರ ಬೆಂಬಲ ಮತ್ತು ಅತ್ಯುತ್ತಮ ಸಾಲಗಾರರ ಪ್ರೋತ್ಸಾಹ, ಷೇರುದಾರರು, ಠೇವಣಿದಾರರು ಮತ್ತು ಗ್ರಾಹಕರ ಸಹಕಾರವೇ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಕಾರಣವಾಗಿದೆ ಎಂದ ಮುರುಗೇಶ್ ಅವರು, ಸಹಕಾರ ನೀಡುತ್ತಿರುವ ಪ್ರತಿಯೊಬ್ಬರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು. ಒಟ್ಟಿನಲ್ಲಿ ಬ್ಯಾಂಕಿನ ಸಂಸ್ಥಾಪಕರಲ್ಲೊಬ್ಬರಾದ ಕೀರ್ತಿಶೇಷ ಎನ್.ಎಂ.ಜೆ.ಬಿ. ಆರಾಧ್ಯ ಅವರ ಕನಸು ನನಸಾಗಿದೆ ಎಂದು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಪರಶುರಾಮಪ್ಪ, ನಿರ್ದೇಶಕರುಗಳಾದ ಎ.ಹೆಚ್. ಕುಬೇರಪ್ಪ, ಕಿರುವಾಡಿ ವಿ. ಸೋಮಶೇಖರ್, ಶಂಕರ್ ಖಟಾವಕರ್, ಬಿ. ಚಿದಾನಂದಪ್ಪ, ಎಸ್.ಕೆ. ಪ್ರಭುಪ್ರಸಾದ್, ಪಿ.ನಾಗೇಂದ್ರಚಾರಿ, ಕೆ.ಎಂ. ಜ್ಯೋತಿಪ್ರಕಾಶ್, ಪಿ.ಹೆಚ್. ವೆಂಕಪ್ಪ, ಶ್ರೀಮತಿ ಉಮಾ ವಾಗೀಶ್, ಶ್ರೀಮತಿ ಅನಿತಾ ಕೋಗುಂಡಿ ಪ್ರಕಾಶ್, ಶ್ರೀಮತಿ ಅನುಪಾ ಡಾ. ವೀರೇಂದ್ರ ಸ್ವಾಮಿ, ಎ. ಕೊಟ್ರೇಶ್, ವಿಶಾಲ್ ಆರ್. ಸಂಘವಿ, ವೃತ್ತಿಪರ ನಿರ್ದೇಶಕರುಗಳಾದ ಆರ್.ವಿ. ಶಿರಸಾಲಿಮಠ, ಕಿರಣ್ ಆರ್. ಶೆಟ್ಟಿ, ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳಾದ ಕೆ.ಎಂ. ಬಸವರಾಜ್, ಶ್ರೀಮತಿ ಕೆ.ಎಂ. ಶೈಲಾ ಹಾಲಸ್ವಾಮಿ ಕಂಬಳಿ, ಶ್ರೀಮತಿ ಜಿ.ಸಿ.ವಸುಂಧರಾ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಶ್ರೀಮತಿ ಉಮಾ ವಾಗೀಶ್, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶ್ರೀಮತಿ ಕೆ.ಎಂ. ಶೈಲಾ ಹಾಲಸ್ವಾಮಿ ಕಂಬಳಿ ಹಾಗೂ ಶ್ರೀಮತಿ ಸಂಗೀತ ರಾಘವೇಂದ್ರ, ಶ್ರೀಮತಿ ಗಾಯತ್ರಿ ಮಾಯಾಚಾರಿ ಅವರುಗಳ ಪ್ರಾರ್ಥನೆಯ ನಂತರ ಹಿರಿಯ ನಿರ್ದೇಶಕ ಶಂಕರ್ ಖಟಾವ್ಕರ್ ಸ್ವಾಗತಿಸಿದರು. ನಿರ್ದೇಶಕರೂ ಆಗಿರುವ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಎ.ಹೆಚ್. ಕುಬೇರಪ್ಪ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎನ್. ತುಳಸಿನಾಥ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಿ. ಚಿದಾನಂದಪ್ಪ ವಂದಿಸಿದರು.