ದಾವಣಗೆರೆ, ಜು.29- 25 ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ (ದಾವಣಗೆರೆ) ಇವರ ವತಿಯಿಂದ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ. ಚಿಗಟೇರಿ ಅವರ ಮಾರ್ಗದರ್ಶನದಲ್ಲಿ ಅಮರ್ ಜವಾನ್ ಸ್ಮಾರಕ ಉದ್ಯಾನವನದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಗಡಿ ಕಾಯುವ ಯೋಧರಿಗೆ ಗಡಿ ಯೊಳಗಿನ ಪುಟ್ಟ ಕೈಗಳಿಂದ ನಮನ ಸಲ್ಲಿಸಲಾಯಿತು.
1999 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದಲ್ಲಿ ಗೆದ್ದ ವೀರ ಯೋಧರು ಮತ್ತು ಅಮರ ಮರಣ ಹೊಂದಿದ ದಿವಸವನ್ನು ಪ್ರತಿ ವರ್ಷ ಜು.26 ರಂದು ಆಚರಿಸುತ್ತಾ ಬಂದಿದ್ದೇವೆ. ಇದು 25 ನೇ ವರ್ಷಾಚರಣೆ ಆಗಿದೆ ಎಂದು ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಕ್ಷರಪ್ಪ ಮಕ್ಕಳಿಗೆ ಕಾರ್ಗಿಲ್ ವಿಜಯ ದಿವಸ್ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸಹಾಯಕ ಆಯುಕ್ತ ಎನ್.ಕೆ. ಕೊಟ್ರೇಶ್ ಅವರು, ವೀರ ಯೋಧರ ಸ್ಮಾರಕಕ್ಕೆ ಹೂವು ಗುಚ್ಛ ಇಟ್ಟು ನಮನ ಸಲ್ಲಿಸಿದರು.
ಮಾಜಿ ಯೋಧರಾದ ಸುರೇಶ್, ಸಿದ್ದಗಂಗಾ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ಮಾರಕಕ್ಕೆ ಪುಷ್ಪ ಗುಚ್ಛವನ್ನಿಟ್ಟು ಗೌರವ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ. ರತ್ನ. ಸ್ಕೌಟ್ ಮಾಸ್ಟರ್ ದುರುಗಪ್ಪ ಮತ್ತು ಗೈಡ್ ಕ್ಯಾಪ್ಟನ್ ದೀಪ, ಹಾಗೂ ಯುವ ಸಮಿತಿ ಸದಸ್ಯರಾದ ಮುಸ್ತಾಫ್ ದೀಪಕ್, ನವೀನ್. ಎಸ್. ಜಿ. ವಿ. ಅಶ್ವಿನಿ ಉಪಸ್ಥಿತರಿದ್ದರು.