ಹರಿಹರ, ಜು.21- ಉತ್ತಮ ಮಳೆಯಿಂದಾಗಿ ನಗರದ ತುಂಗಭದ್ರಾ ನದಿಯಲ್ಲಿ ರಮಣೀಯವಾಗಿ ಹರಿಯುತ್ತಿರುವ ನೀರನ್ನು ವೀಕ್ಷಿಸಲು ಭಾನುವಾರವಾಗಿದ್ದ ಇಂದು ಜಿಲ್ಲೆಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ನದಿಯಲ್ಲಿ ಹರಿಯುತ್ತಿರುವ ನೀರಿನ ಬಳಿ ಕುಟುಂಬದ ಸದಸ್ಯರು ನಿಂತುಕೊಂಡು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ನದಿಯ ಕೆಲ ಭಾಗದಲ್ಲಿ ಹರಿಯುತ್ತಿರುವ ನೀರಿನ ಬಳಿ ಹೋಗಿ ಫೋಟೋ ತೆಗೆಸಿಕೊಳ್ಳುವ ನಾಗರಿಕರನ್ನು, ನದಿಯ ಒಳಗಡೆ ಹೋಗದಂತೆ ತಡೆ ಯಲು ಮತ್ತು ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ – ಬೈಕ್ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುತ್ತಿರುವುದನ್ನು ತಡೆದು ವಾಹನಗಳು ಸರಾಗವಾಗಿ ಓಡಾಡುವುದಕ್ಕೆ ದಾರಿಮಾಡುವಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹರ ಸಾಹಸ ಪಟ್ಟರು.
ಜನರು ನದಿಯಲ್ಲಿ ಚಿಕ್ಕ ತೆಪ್ಪದಲ್ಲಿ ಕುಳಿತುಕೊಂಡು ನದಿಯ ಮಧ್ಯದಲ್ಲಿ ಹೋಗಿ ಸಂಭ್ರಮಸಿದ್ದು ಕಂಡುಬಂದಿತು.
ನದಿ ವೀಕ್ಷಿಸಲು ಆಗಮಿಸಿದ ಪ್ರವಾಸಿಗರು ಇಂದು ಹುಣ್ಣಿಮೆಯಾಗಿದ್ದರಿಂದ ನದಿ ದಂಡೆಯ ಮೇಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠ, ಆಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ, ಹರಿಹರೇಶ್ವರ ಸ್ವಾಮಿ ಹಾಗೂ ದರ್ಗಾಗಳಿಗೆ ಭೇಟಿಕೊಟ್ಟು ದೇವರ ಆಶೀರ್ವಾದ ಪಡೆದರು.
ನದಿಯ ಹತ್ತಿರ ಶೇಂಗಾ, ಐಸ್ ಕ್ರೀಂ, ಕಾರ – ಚಕ್ಕಲಿ, ಪೇರಲ ಕಾಯಿ, ಬಟಾಣಿ, ಕಾರ – ಮಂಡಕ್ಕಿ ಸೇರಿದಂತೆ ಸ್ನ್ಯಾಕ್ಸ್ ವ್ಯಾಪಾರ ವಹಿವಾಟು ಬಹಳಷ್ಟು ಜೋರಾಗಿ ನಡೆಯಿತು.
ಈ ಸಂದರ್ಭದಲ್ಲಿ ಪಿಎಸ್ಐ ಶ್ರೀಪತಿ ಗಿನ್ನಿ, ಎಎಸ್ಐ ಮನ್ಸೂರ್ ಅಹ್ಮದ್, ಪೊಲೀಸ್ ಇಲಾ ಖೆಯ ಸಿಬ್ಬಂದಿಗಳಾದ ಕೆ.ಮಂಜುನಾಥ್, ದೇವ ರಾಜ್, ಜಗದೀಶ್, ಸತೀಶ್, ದುಗ್ಗೇಶ್ ದಾವಣಗೆರೆ, ರಿಜ್ವಾನ್, ನಾಗರಾಜ್, ಇತರರು ಹಾಜರಿದ್ದರು.