ಜಗಳೂರು, ಜು. 21 – ಟಾಸ್ಕ್ ಫೊರ್ಸ್ ಸಮಿತಿ ನೇತೃತ್ವದಲ್ಲಿ ಪಟ್ಟ ಣದ ಭುವನೇಶ್ವರಿ ವೃತ್ತ, ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆಗೊಳಿಸುವ ಮೂಲಕ ವಿವಿಧ ವಾರ್ಡ್ಗಳಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ಲಾರ್ವ ಸಮೀಕ್ಷೆ ನಡೆಸಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುದ್ದ ಕುಡಿಯುವ ನೀರನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಮನೆಯ ಸುತ್ತಮುತ್ತ ಚರಂಡಿಗಳಿಗೆ ಕಸ ವಿಲೇವಾರಿ ಮಾಡದೇ ಪಟ್ಟಣ ಪಂಚಾಯಿತಿಯ ಕಸದ ವಾಹನದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಹಸಿಕಸ, ಒಣಕಸ ವಿಂಗಡಿಸಿ ವಿಲೇವಾರಿ ಮಾಡಬೇಕು. ಪೌರ ಕಾರ್ಮಿಕರೊಂದಿಗೆ ಸ್ವಚ್ಛತೆಗೆ ಸಹಕರಿಸಬೇಕು. ಮಹಾಮಾರಿ ಡೆಂಗ್ಯೂ ಜ್ವರದ ಪ್ರಕರಣಗಳು ಕಂಡುಬರದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಮನವಿ ಮಾಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವಿಶ್ವನಾಥ್ ಮಾತನಾಡಿ,’ರಾಜ್ಯವ್ಯಾಪಿ ಡೆಂಗ್ಯೂ ವೈರಸ್ ಸೋಂಕು ಹರಡುತ್ತಿದ್ದು. ತಾಲ್ಲೂಕಿನಲ್ಲಿ ಅತಿ ಕಡಿಮೆ ಡೆಂಗ್ಯೂ ಪ್ರಕರಣಗಳು ಕಂಡು ಬಂದಿವೆ. ಸಾರ್ವಜನಿಕರು ಆತಂಕ ತೊರೆದು, ಚಿಕ್ಕ ಮಕ್ಕಳು,ವಯೋವೃದ್ದರನ್ನು ಅನಗತ್ಯ ಹೊರಗಡೆ ಸುತ್ತಾಡಿಸದೇ ಸುರಕ್ಷಿತವಾಗಿ ನೋಡಿಕೊಳ್ಳಿ. ಇತ್ತೀಚೆಗೆ ಪಟ್ಟಣದಲ್ಲಿ ಜ್ವರದಿಂದ ಸಾವನ್ನಪ್ಪಿದ ಯುವತಿ ಡೆಂಗ್ಯೂ ಜ್ವರದಿಂದ ಅಲ್ಲ ಎಂದು ಬಳ್ಳಾರಿ ಖಾಸಗಿ ಆಸ್ಪತ್ರೆ ವರದಿ ನೀಡಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಲುಕ್ಮಾನ್, ಆರೋಗ್ಯ ನಿರೀಕ್ಷಕ ಪ್ರಶಾಂತ್ ಕುಮಾರ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ನರ್ಸ್ಗಳು ಇದ್ದರು.
ಪಟ್ಟಣದಲ್ಲಿ ರೇಖಾ (19) ಜ್ವರದಿಂದ ಬಳಲಿ ಸಾವಿಗೀಡಾದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಡೆಂಗ್ಯೂ ಟಾಸ್ಕ್ ಫೋರ್ಸ್ಮಿತಿ ಪಟ್ಟಣದಲ್ಲಿ ಜಾಗೃತಿ, ಲಾರ್ವಾ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಿದೆ.