ಕಾನೂನಿನಡಿಯಲ್ಲಿ ಭೋವಿ ಸಮಾಜವನ್ನು ಸಮರ್ಥಗೊಳಿಸಲು ಬದ್ಧ

ಕಾನೂನಿನಡಿಯಲ್ಲಿ ಭೋವಿ ಸಮಾಜವನ್ನು ಸಮರ್ಥಗೊಳಿಸಲು ಬದ್ಧ

ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಚಿತ್ರದುರ್ಗ, ಜು. 21 – ಕುಲ ಕಸುಬನ್ನೇ ನಂಬಿ ಬದುಕುತ್ತಿರುವ ಭೋವಿ ಸಮಾಜವನ್ನು ಸಾಮಾಜಿಕವಾಗಿ ಸಮರ್ಥಗೊಳಿಸಲು ಕಾನೂನು ಅಡಿಯಲ್ಲೇ ಏನೆಲ್ಲಾ ಅವಕಾಶವಿದೆಯೋ ಅದನ್ನೆಲ್ಲಾ ಮಾಡುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಭೋವಿ ಗುರುಪೀಠದಲ್ಲಿ ನಿನ್ನೆ ಏರ್ಪಾಡಾಗಿದ್ದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಪೀಠಾಧಿಪತಿಗಳಾಗಿ 25 ವರ್ಷಗಳನ್ನು ಪೂರೈಸಿ, ಸಮಾಜವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ನೂರು ಕಾಲ ಬಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ವಿದ್ಯೆಯಿಂದ ಮಾತ್ರ ಆರ್ಥಿಕ, ಸಾಮಾಜಿಕವಾಗಿ ಮೇಲೆ ಬರಬಹುದು. ಸಂವಿಧಾನದಡಿ ಅಕ್ಷರ ಕಲಿಯಲು ಎಲ್ಲರಿಗೂ ಅವಕಾಶವಿದೆ. ಭೋವಿ ಸಮಾಜದಲ್ಲಿ ಹುಟ್ಟಿದವರು ಉನ್ನತ ಅಧಿಕಾರಿಗಳಾಗಬಹುದು. ದಾಸ್ಯ ಪದ್ದತಿಯಿಂದ ಈಗಲೂ ಅನೇಕರು ಗುಲಾಮಗಿರಿಯಲ್ಲಿದ್ದಾರೆ. ಗುಲಾಮಗಿರಿ ಮನಸ್ಥಿತಿ ಬದಲಾಗಬೇಕಾದರೆ, ಶಿಕ್ಷಣವಂತರಾಗಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಬೇಕೆಂದು ಭೋವಿ ಸಮುದಾಯಕ್ಕೆ ಕರೆ ನೀಡಿದರು.

ಭೋವಿ ಅಭಿವೃದ್ದಿ ನಿಗಮ ರಚಿಸಿದ್ದು, ನಾವು, ದೇವಯ್ಯನನ್ನು ಕೆ.ಪಿ.ಎಸ್ಸಿ. ಸದಸ್ಯನಾಗಿ ಮಾಡಿದ್ದೇನೆ. ಭೋವಿ ಅಭಿವೃದ್ದಿ ನಿಗಮವನ್ನು ಭೋವಿ ವಡ್ಡರ ನಿಗಮ ಎಂದು ನಾಮಕರಣ ಮಾಡೋಣ. ಸಿದ್ದರಾಮೇಶ್ವರ ಅಧ್ಯಯನ ಪೀಠ ಮಾಡಲಾಗಿದೆ. ಭೋವಿ ಜನಾಂಗದಿಂದ ವಿಧಾನಪರಿಷತ್ ನಾಮ ನಿರ್ದೇಶನ ಮಾಡಿ, ಭೋವಿ ಅಭಿವೃದ್ದಿ ನಿಗಮಕ್ಕೆ ಅನುದಾನ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿಗಳು ವಾಗ್ದಾನ ಮಾಡಿದರು.

ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮೀಜಿ ಮಾತನಾಡಿ, ಭೋವಿ ಸಮುದಾಯದವರು ಶ್ರಮ ಜೀವಿಗಳು, ಇಂತಹ ಜನಾಂಗವನ್ನು ಬಿಟ್ಟು, ಬೇರೆ ಯಾವ ಸಮಾಜವೂ ಏನು ಮಾಡಲು ಆಗಲ್ಲ. ಭೋವಿ ಸಮುದಾಯದ ಏಳಿಗೆಗೆ ಗುರುಪೀಠ ಸ್ಥಾಪಿಸಿಕೊಂಡು, ಕಳೆದ 25 ವರ್ಷಗಳಿಂದಲೂ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸುಲಭದ ಕೆಲಸವಲ್ಲ. ಅನ್ನ, ಅಕ್ಷರ, ಆರ್ಥಿಕ ಸಂಕಷ್ಟ ಪರಿಹರಿಸುವಲ್ಲಿ ದೃಢ ಸಂಕಲ್ಪ ತೊಟ್ಟಿದ್ದಾರೆ. ಸ್ವಾಮೀಜಿಯವರದು ಉತ್ತಮ ವ್ಯಕ್ತಿತ್ವ ಎಂದು ಆಶೀರ್ವಚನ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರ ಯೋಜನೆಗಳನ್ನು ಹಾಕಿಕೊಂಡು ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಮಂತ್ರಾಲಯ ಜಾತ್ಯತೀತ ಕ್ಷೇತ್ರ ಹಿಂದೂ, ಮುಸಲ್ಮಾನ, ಕ್ರೈಸ್ತರು ನಮ್ಮಲ್ಲಿಗೆ ಬರುತ್ತಾರೆ. ಮುಂದಿನ ತಿಂಗಳು ನಡೆಯುವ ಜಾತ್ರೆಗೆ ಬನ್ನಿ ಎಂದು ಮುಖ್ಯಮಂತ್ರಿಗಳನ್ನು ಮಂತ್ರಾಲಯಕ್ಕೆ ಆಹ್ವಾನಿಸಿದರು.

ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಬಸವಣ್ಣ ಯುಗ ಯುಗಗಳ ಸಾಂಸ್ಕೃತಿಕ ನಾಯಕನಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈಗಿನ ಕಾಲದ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದರು.

ದೀಕ್ಷಾ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಭೋವಿ ಅಭಿವೃದ್ದಿ ನಿಗಮಕ್ಕೆ ಐದು ನೂರು ಕೋಟಿ ರೂ.ಗಳನ್ನು ಮೀಸಲಿಡಬೇಕು. ಕೆ.ಪಿ.ಸಿ.ಸಿ. ಮೆಂಬರ್, ವಿಧಾನ ಪರಿಷತ್‍ಗೆ ನಾಮನಿರ್ದೇಶನ, ನಮ್ಮ ಜನಾಂಗದವರು ಸಂಸದರಾಗಬೇಕೆಂಬ ಬೇಡಿಕೆಯಿಟ್ಟಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲವನ್ನು ಈಡೇರಿಸಿದ್ದಾರೆ. ನಿಮ್ಮ ಜೊತೆ ನಾವಿರುತ್ತೇವೆ. ನಮ್ಮ ಮಠಕ್ಕೆ ವಿಶೇಷ ಅನುದಾನ ಕೊಡಿ ಎಂದು ಕೋರಿದರು.

ಭೋವಿಗಳು ಕೆರೆ ಕಟ್ಟೆ ಕಟ್ಟುವುದು ಕಲ್ಲು ಹೊಡೆಯುವುದು ಕುಲ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ದುಶ್ಚಟಗಳಿಂದ ದೂರವಿರುವಂತೆ ಸ್ವಾಮೀಜಿಗಳು ಜಾಗೃತಿ ಮೂಡಿಸುತ್ತಿದ್ದಾರೆ. ಹದಿನಾಲ್ಕನೆ ವಯಸ್ಸಿನಲ್ಲಿಯೇ ಸ್ವಾಮೀಜಿಯಾಗಿ ದೀಕ್ಷೆ ಪಡೆದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ 25 ವರ್ಷಗಳನ್ನು ಕಳೆದಿದ್ದಾರೆ. ಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಕುಲ ಕಸುಬಿಗೆ ಕೊಡಲಿ ಪೆಟ್ಟು ಬಿದ್ದಿದೆ. ಕಲ್ಲು ಒಡೆಯಲು ಅವಕಾಶ ಮಾಡಿಕೊಡಿ. ಅರಣ್ಯ ಇಲಾಖೆಯವರ ಕಿರುಕುಳ ತಪ್ಪಿಸಿ ಭೋವಿ ಅಭಿವೃದ್ದಿ ನಿಗಮಕ್ಕೆ ಐದು ನೂರು ಕೋಟಿ ರೂ. ಅನುದಾನ ಕೊಡಿ ಎಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.

ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕರುಗಳಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎ.ಸಿ.ಶ್ರೀನಿವಾಸ್, ವಿ. ವೆಂಕಟೇಶ್, ಕೋಲಾರ ಸಂಸದ ಮಲ್ಲೇಶ್‍ಬಾಬು, ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರವಿಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ನ್ಯಾಯವಾದಿ ಶಂಕರಪ್ಪ, ನಾರಾಯಣಸ್ವಾಮಿ, ಸೀತಾರಾಮಪ್ಪ ಸೇರಿದಂತೆ ಭೋವಿ ಸಮಾಜದ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

error: Content is protected !!