ದಾವಣಗೆರೆ, ಜು.14- ಕಕ್ಷಿದಾರರ ಸಮಯ ಮತ್ತು ಶುಲ್ಕ ಉಳಿಸಲು ಲೋಕ್ ಅದಾಲತ್ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2023-24ರ ರಾಷ್ಟ್ರೀಯ ಮಟ್ಟದ ಲೋಕ ಅದಾಲತ್ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ನ್ಯಾಯಾಲಯದ ವ್ಯಾಜ್ಯ ಮಾತ್ರವಲ್ಲದೆ ಪೂರ್ವ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಲೋಕ ಅದಾಲತ್ ನಡೆಸುತ್ತಿದೆ. ಕಕ್ಷಿದಾರರಲ್ಲಿ ಶತ್ರುತ್ವದ ಬದಲಿಗೆ ಉತ್ತಮ ಬಾಂಧವ್ಯ ಬೆಳೆಸಲು ಲೋಕ ಅದಾಲತ್ ಸಹಾಯಕವಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಮಾತನಾಡಿ, ನ್ಯಾಯಾಲಯಗಳಲ್ಲಿ ಪ್ರಕರಣ ವಿಲೇವಾರಿ ಮಾಡಲು ಹಲವು ಪ್ರಕ್ರಿಯೆ ನಡೆಸಬೇಕಾಗುತ್ತದೆ. ಲೋಕ ಅದಾಲತ್ತಿನಲ್ಲಿ ರಾಜೀ ಸಂಧಾನದ ಮೂಲಕ ಸತ್ಯಾಂಶ ತಿಳಿದುಕೊಂಡು, ತಪ್ಪನ್ನು ಅವರಿಗೆ ಅರ್ಥ ಮಾಡಿಕೊಳ್ಳಲು ಅವಕಾಶ ನೀಡುವ ಜತೆಗೆ ಪ್ರಕರಣ ಬಗೆ ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಸಂವಿಧಾನದಡಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಕಾರ್ಯ ನಿರ್ವಹಿಸುತ್ತವೆ. ಶಾಸಕಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡ ಜನ, ಕಾರ್ಯಾಂಗದ ಮೇಲೂ ನಂಬಿಕೆ ಕಳೆದು ಕೊಂಡಿದ್ದಾರೆ. ಆದ್ದರಿಂದ ನ್ಯಾಯಾಂಗ ತನ್ನ ಜವಾಬ್ದಾರಿ ಮರೆಯದೇ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಆರ್.ಎಲ್.ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಸ್. ಯತೀಶ್, ಐಕ್ಯೂಎಸಿ ಸಹ ಸಂಚಾಲಕ ಬಿ.ಪಿ. ಬಸವನಗೌಡ, ಕಾರ್ಯಕ್ರಮದ ಸಂಚಾಲಕ ಟಿ. ವಿದ್ಯಾಧರ ವೇದವರ್ಮ, ಆರ್. ಭಾಗ್ಯಲಕ್ಷ್ಮಿ, ಡಾ.ಸೋಮಶೇಖರ್, ಪ್ರೊ. ಪ್ರದೀಪ್ ಮತ್ತು ಇತರರಿದ್ದರು.