ಮಲೇಬೆನ್ನೂರು : ಶೈಕ್ಷಣಿಕ ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ಬಿಇಓ ಹನುಮಂತಪ್ಪ ಕರೆ
ಮಲೇಬೆನ್ನೂರು, ಜು.11- ಮಕ್ಕಳಲ್ಲಿ ಕಲಿಕೆಯ ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ಕಾರ್ಯಾಗಾರಗಳನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ. ಆದರೆ, ಈ ಬಗ್ಗೆ ಕೆಲವು ಖಾಸಗಿ ಶಾಲೆಗಳು, ಶಿಕ್ಷಕರು ನಿರ್ಲಕ್ಷ್ಯ ತೋರಿ, ಗೈರು ಹಾಜರಿ ಆಗುತ್ತಿದ್ದು, ಅಂತಹವರಿಗೆ ನೊಟೀಸ್ ಜಾರಿ ಮಾಡುವುದಾಗಿ ಬಿಇಓ ಹನುಮಂತಪ್ಪ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ಹರಿಹರ ತಾಲ್ಲೂಕಿನ ಪ್ರೌಢಶಾಲೆಗಳ ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹರಿಹರ ತಾಲ್ಲೂಕಿನಲ್ಲಿ 64 ಪ್ರೌಢಶಾಲೆಗಳಿದ್ದು, ಕಾರ್ಯಾಗಾರಕ್ಕೆ 35 ಶಿಕ್ಷಕರು ಮಾತ್ರ ಹಾಜರಿದ್ದೀರಿ. ಈ ಬಾರಿ 10ನೇ ತರಗತಿ ಫಲಿತಾಂಶ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆ ನೀಡಿರುವ ಶೈಕ್ಷಣಿಕ ಶಿಕ್ಷಣ ಮಾರ್ಗದರ್ಶಿ ಪುಸ್ತಕವನ್ನು ಇಲ್ಲಿಗೆ ಬಂದಿರುವ ಎಷ್ಟು ಜನ ಓದಿದ್ದೀರಿ ? ಎಂದು ಪ್ರಶ್ನಿಸಿದ ಬಿಇಓ ಹನುಮಂತಪ್ಪ ಅವರು ಪುಸ್ತಕದಲ್ಲಿರುವ ಶೈಕ್ಷಣಿಕ ಅಂಶ ಹಾಗೂ ಆಡಳಿತ ಸುತ್ತೋಲೆಗಳ ಬಗ್ಗೆ ಶಿಕ್ಷಕರಿಗೆ ತಿಳಿಸಿದರು.
ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಉದ್ದೇಶ ನಿಮಗಿದ್ದರೆ, ಮೊದಲು ನೀವು ಇಂತಹ ಕಾರ್ಯಾಗಾ ರಗಳಿಗೆ ಕಡ್ಡಾಯವಾಗಿ ಹಾಜರಾಗಿ ವಿಷಯಗಳನ್ನು ತಿಳಿದುಕೊಳ್ಳಬೇಕು. ಶಾಲಾ ತರಗತಿಗಳಿಗೆ ಪಾಠ ಮಾಡಲು ತೆರಳುವ ಮುನ್ನ ನೀವು ಮನೆಯಲ್ಲಿ ಪುಸ್ತಕವನ್ನು ಓದಿಕೊಂಡು ಚೆನ್ನಾಗಿ ಸಿದ್ದರಾಗಿರಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
8ನೇ ತರಗತಿ ಮಕ್ಕಳಿಗೆ ಪ್ರತಿ 3ನೇ ಶನಿವಾರ `ಬ್ಯಾಗ್‌ಲೇಸ್ ಡೇ’ ಜಾರಿಗೊಳಿಸಿದ್ದು, ಆ ದಿನ ಮಕ್ಕಳಿಗೆ ಸಂಭ್ರಮದ ಶನಿವಾಗಿರುತ್ತದೆ. ಆ ವೇಳೆ ನೀವು ಮಕ್ಕಳಿಗೆ ವಿವಿಧ ಆಟ, ಮನರಂಜನೆ, ರಂಗೋಲಿ ಇತ್ಯಾದಿ ಮೂಲಕ ಶಿಕ್ಷಣದ ಹರಿವು ಮೂಡಿಸುವ ಕೆಲಸ ಮಾಡಬೇಕೆಂದು ಶಿಕ್ಷಕರಿಗೆ ತಿಳಿಸಿದ ಹನುಮಂತಪ್ಪ ಅವರು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ, 10ನೇ ತರಗತಿ ಫಲಿತಾಂಶ ಹೆಚ್ಚಿಸುವಂತೆ ಕರೆ ನೀಡಿದರು.
ಹರಿಹರ ಗಾಂಧಿ ಮೈದಾನ ಪ್ರೌಢಶಾಲೆಯ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ನಾಗರಾಜ್ ಅವರು, ಆಂಗ್ಲ ಭಾಷಾ ವಿಷಯ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.
ಪ್ರೌಢಶಾಲೆಯ ಉಪಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ್ ಅಧ್ಯಕ್ಷತೆ ವಹಿಸಿದ್ದರು. ಬೀರಲಿಂಗೇಶ್ವರ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಜಯ್ಯಣ್ಣ, ಹಾಲಿವಾಣ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಓ.ಜಿ.ಮಂಜುನಾಥ್, ಸರ್ಕಾರಿ ಉರ್ದು ಪ್ರೌಢಶಾಲೆಯ ಶಿಕ್ಷಕ ರೇವಣ ಸಿದ್ದಪ್ಪ ಅಂಗಡಿ ಮತ್ತಿತರರು ವೇದಿಕೆಯಲ್ಲಿದ್ದರು.
ಶಿಕ್ಷಕ ಬಾಲರಾಜ್ ಸ್ವಾಗತಿಸಿದರು. ಆಂಗ್ಲ ಭಾಷಾ ವೇದಿಕೆ ಅಧ್ಯಕ್ಷ ಸುರೇಶ್ ಎಸ್.ಮೂಲಿಮನಿ ನಿರೂಪಿಸಿ, ವಂದಿಸಿದರು.