ಬಸ್ ಸಂಚಾರಕ್ಕೆ ಶಾಸಕ ದೇವೇಂದ್ರಪ್ಪ ಹಸಿರು ನಿಶಾನೆ
ಜಗಳೂರು, ಜು. 8 – ಜಗಳೂರಿನಿಂದ ಬೆಂಗಳೂರಿಗೆ ನೂತನ ಅಶ್ವಮೇಧ ಬಸ್ ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಸಿಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಕೆಎಸ್ಸಾರ್ಟಿಸಿ ಮಿನಿ ಬಸ್ ನಿಲ್ದಾಣದ ಬಳಿ ಅಶ್ವಮೇಧ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದಿಂದ ಬೆಳಿಗ್ಗೆ 5.25 ಕ್ಕೆ ಚಿತ್ರದುರ್ಗ ಮಾರ್ಗದಿಂದ ಕಛೇರಿ ಸಮಯಕ್ಕೆ ಬೆಂಗಳೂರು ತಲುಪಲು ಪ್ರಯಾಣಿಕರ ಅನುಕೂಲಕ್ಕಾಗಿ ವಿನೂತನ ಅಶ್ವಮೇಧ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇದುವರೆಗೂ ಬೆಳಗಿನ ಜಾವ ಪಟ್ಟಣ ದಿಂದ ಬೆಂಗಳೂರಿಗೆ ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದರು. ಇದೀಗ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶೀಘ್ರದಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳ ಜೊತೆ ಡಿಪೋ ಸ್ಥಾಪನೆ ಬಗ್ಗೆ ಚರ್ಚಿಸಿ ಅಧಿವೇಶನದಲ್ಲಿ ಸಾರಿಗೆ ಸಚಿವರಿಗೆ ಮನವಿ ಮಾಡುವ ಮೂಲಕ ಪಟ್ಟಣದಲ್ಲಿ ಕೆಎಸ್ಸಾರ್ಟಿಸಿ ಡಿಪೋ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು.
ಖಾಸಗಿ ಬಸ್ಗಳನ್ನೇ ಅವಲಂಬಿಸಿರುವ ಮಾಲೀಕ ರಿಗೆ ಹಾಗೂ ಕಾರ್ಮಿಕರಿಗೆ ನಾನು ವಿರೋಧಿಯಲ್ಲ. ಸರ್ಕಾರದ ಸಾರಿಗೆ ಸೌಲಭ್ಯ ಕಲ್ಪಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ರಾತ್ರಿ ವೇಳೆ ದಾವಣಗೆರೆಯಿಂದ ಜಗಳೂರಿಗೆ ಬಸ್ ಗಳಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು. ಹಂತಹಂತವಾಗಿ ಶಾಸಕರ ಸಹಕಾರ ದಿಂದ ಸರ್ಕಾರಿ ಬಸ್ ಸಂಚಾರ ಕಲ್ಪಿಸಲಾಗುವುದು. ರಾಜ್ಯದ ಕೆಲವೇ ಬಸ್ಗಳಲ್ಲಿ ಅಶ್ವಮೇಧ ಬಸ್ ಕೂಡ ವಿಶೇಷ ಸೌಕರ್ಯ ಹೊಂದಿದ್ದು,ಇಂತಹ ಬಸ್ ಜಗಳೂ ರಿಗೆ ಆಗಮಿಸಿರುವುದು ಸಂತಸದ ಸಂಗತಿ ಎಂದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಸುರೇಶ್ ಗೌಡ, ತಿಪ್ಪೇಸ್ವಾಮಿಗೌಡ, ಪಲ್ಲಾಗಟ್ಟೆ ಶೇಖರಪ್ಪ,
ಸಿ. ತಿಪ್ಪೇಸ್ವಾಮಿ, ಬಿ. ಮಹೇಶ್ವರಪ್ಪ, ಸಾವಿತ್ರಮ್ಮ,ಪ.ಪಂ ಸದಸ್ಯ ರಮೇಶ್ ರೆಡ್ಡಿ, ಶಕೀಲ್ ಅಹಮ್ಮದ್, ಲುಕ್ಮಾನ್ ಖಾನ್, ಕೆಎಸ್ ಆರ್ ಟಿಸಿ ಡಿಟಿಓ ಫಕೃದ್ದೀನ್ , ಇದ್ದರು.