ಕಾಬೂಲ್, ಜು. 8 – ದಶಕಗಳ ಸಮರದಿಂದ ತತ್ತರಿಸಿರುವ ಆಫ್ಘಾನಿಸ್ತಾನದಲ್ಲಿ ಹಲವು ಮೂಲಭೂತ ಸೌಲಭ್ಯಗಳಿಲ್ಲ. ಅದರಲ್ಲಿ ಅಂಚೆ ವಿಳಾಸವೂ ಒಂದು!
ಆಫ್ಘಾನಿಸ್ತಾನದ ಹಲವು ಭಾಗಗಳಲ್ಲಿ ರಸ್ತೆಗಳಿಗೆ ಹೆಸರಾಗಲೀ, ಮನೆಗಳಿಗೆ ಸಂಖ್ಯೆ ಯಾಗಲೀ ಇಲ್ಲ. ಈ ಪರಿಸ್ಥಿತಿ ನಿಭಾಯಿಸಲು ಕಂಡುಕೊಂಡಿದ್ದ ವಿನೂತನ ವಿಧಾನವೆಂದರೆ ಮಸೀದಿಗಳನ್ನೇ ವಿಳಾಸವಾಗಿ ಪರಿವರ್ತಿಸಿ ಕೊಳ್ಳುವುದು. ಜನರಿಗೆ ಬಿಲ್ ಇಲ್ಲವೇ ಹಣ ರವಾನಿಸಬೇಕಾದರೆ, ಮಸೀದಿಗಳನ್ನೇ ವಿಳಾಸವಾಗಿ ಬಳಸಿಕೊಳ್ಳಲಾಗುತ್ತದೆ. ಈ ಮಸೀದಿಗಳು ಪ್ರಾರ್ಥನೆ ಹಾಗೂ ಪಾವತಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ.
ಆಡಳಿತಾರೂಢ ತಾಲಿಬಾನ್ ಈಗ ರಾಷ್ಟ್ರೀಯ ಅಂಚೆ ವ್ಯವಸ್ಥೆ ಸುಧಾರಿಸಬೇ ಕೆಂದು ಬಯಸಿದೆ. ದೇಶದ ಪ್ರತಿ ರಸ್ತೆಯಲ್ಲಿ ಅಂಚೆ ಪೆಟ್ಟಿಗೆ ಇರಿಸಲು ಮುಂದಾಗಿದೆ.
ಇ-ವಾಣಿಜ್ಯ ತಾಣಗಳ ಮೂಲಕ ವ್ಯಾಪಾರಕ್ಕೆ ಅವಕಾಶ ಹಾಗೂ ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್ ಖರೀದಿ ಯಂತಹ `ಉನ್ನತ’ ಗುರಿಗಳನ್ನು ತಾಲಿಬಾನ್ ಹೊಂದಿದೆ. ದೇಶದ ಬಹುತೇಕರು ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿದ್ದಾರೆ. ಸರಕು ಸಾಗಣೆ ವ್ಯವಸ್ಥೆ ಆರಂಭಿಕ ಹಂತ ದಲ್ಲಿದೆ. ಅಂತರರಾಷ್ಟ್ರೀಯ ಕೋರಿಯರ್ ಸಂಸ್ಥೆಗಳು ರಾಜಧಾನಿ ಕಾಬೂಲ್‌ಗೂ ಸರಕುಗಳನ್ನು ರವಾನಿಸುವುದಿಲ್ಲ.
ಇದೆಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಂಚೆ ಸೇವೆಗಾಗಿ ಆಫ್ಘಾನ್ ಜನ ಹೆಚ್ಚಿನ ಶುಲ್ಕ ತೆರುತ್ತಿದ್ದಾರೆ. ದೇಶದ ಅರ್ಧದಷ್ಟು ಜನ ಮಾನವೀಯ ನೆರವನ್ನೇ ಅವಲಂಬಿಸಿರುವುದರಿಂದ, ಅಂಚೆ ಬಲು ದುಬಾರಿಯಾಗಿದೆ.
ಆಫ್ಘಾನ್ ಅಂಚೆ ವ್ಯವಸ್ಥೆಯು ಕಾಗದಗಳನ್ನೇ ಅವಲಂಬಿಸಿದೆ. ಯಾರೂ ಇ-ಮೇಲ್ ಬಳಸುವುದಿಲ್ಲ. ಆಫ್ಘಾನಿಸ್ತಾನವು ಅಂತರರಾಷ್ಟ್ರೀಯ ಅಂಚೆ ಒಕ್ಕೂಟದ ಸದಸ್ಯವಾಗಿದೆ. ಆದರೆ, ಬೇರೆ ದೇಶಗಳಿಗೆ ಹೋಲಿಸಿದರೆ, ನಾವಿನ್ನೂ ತೆವಳುತ್ತಿದ್ದೇವೆ ಎಂದು ಆಫ್ಘಾನ್ ವಹಿವಾಟು ಉದ್ಯಮ ಅಭಿವೃದ್ಧಿ ನಿರ್ದೇಶಕ ಜಬೀವುಲ್ಲ ಓಮರ್ ಹೇಳಿದ್ದಾರೆ.
ಆಫ್ಘಾನ್ ಅಂಚೆ ಸಂಸ್ಥೆಯು ದೇಶದಲ್ಲಿ ಸುಮಾರು 500 ಶಾಖೆಗಳನ್ನು ಹೊಂದಿದೆ. ಪಾಸ್‌ಪೋರ್ಟ್ ಹಾಗೂ ಚಾಲನಾ ಅನುಮತಿಯಂತಹ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರತಿನಿತ್ಯ ಸುಮಾರು 15 ಸಾವಿರ ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗುತ್ತಿದೆ.
ಮಹಿಳೆಯರು ಸರ್ಕಾರಿ ಕಚೇರಿಗಳಿಗೆ ಬರಬಾರದು ಎಂದು ತಾಲಿಬಾನ್ ನಿರ್ಬಂಧಿಸಿದೆ. ಹೀಗಾಗಿ ಅಂಚೆ ಕಚೇರಿಗಳು ಮಹಿಳೆಯರು ಸೇವೆ ಪಡೆಯಲೂ ಅತ್ಯಗತ್ಯವಾಗಿವೆ. ಅಂಚೆ ಸೇವೆ ಇಲ್ಲದಿದ್ದರೆ ಮಹಿಳೆಯರು ಅಗತ್ಯ ನೆರವು ಪಡೆಯುವುದು ಕಷ್ಟವಾಗಿದೆ. ಆದರೆ, ಮಹಿಳೆಯರು ಹಾಗೂ ಬಾಲಕಿಯರ ಮೇಲೆ ತಾಲಿಬಾನ್ ಹೇರಿರುವ ನಿರ್ಬಂಧಗಳಿಂದ ಅಂಚೆ ಠಾಣೆಗಳೂ ಹೊರತಾಗಿಲ್ಲ.
ಕಾಬುಲ್‌ನಲ್ಲಿರುವ ಮುಖ್ಯ ಅಂಚೆ ಕಚೇರಿಯಲ್ಲಿ ಮಹಿಳೆಯರು ಹಿಜಾಬ್ ಧರಿಸುವ ಕುರಿತು ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಇಂತಹ ಪರಿಸ್ಥಿತಿ ನಡುವೆಯೂ, ಮಹಿಳೆಯರು ತಮ್ಮ ಅಗತ್ಯ ದಾಖಲೆಗಳನ್ನು ದೃಢೀಕರಣಗೊಳಿಸುವಂತಹ ಕಾರ್ಯಗಳಿಗೆ ಅಂಚೆ ಕಚೇರಿಗಳಿಗೆ ಬರಬೇಕಿದೆ.
ಜನರು ಸೇವೆಗಳಿಗಾಗಿ ಕಚೇರಿಯಿಂದ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಂಚೆ ಕಚೇರಿಯಲ್ಲಿ ಸಾಧ್ಯವಾದಷ್ಟು ಸೇವೆ ಒದಗಿಸಲು ಬಯಸಿದ್ದೇವೆ. ಜನರು ಇರುವ ಕಡೆಯಲ್ಲೆಲ್ಲಾ ಅಂಚೆ ಸೇವೆ ಇರಬೇಕಿದೆ ಎಂದು ಓಮರ್ ಹೇಳುತ್ತಾರೆ.
ಅಂಚೆ ವ್ಯವಸ್ಥೆಗೆ ಮತ್ತೊಂದು ಸಮಸ್ಯೆಯೂ ಕಾಡುತ್ತಿದೆ. ಸರ್ಕಾರಿ ಪತ್ರಗಳ ವ್ಯವಹಾರಕ್ಕೆ ಮಾತ್ರ ಅಂಚೆ ಕಚೇರಿ ಸೀಮಿತವಾಗಿದೆ. ಸಾಮಾಜಿಕ ಜಾಲತಾಣಗಳ ಕಾಲದಲ್ಲಿ, ಜನರು ಪತ್ರಗಳನ್ನು ಬರೆಯುವುದನ್ನು ಮರೆತಿದ್ದಾರೆ. ಹೀಗಾಗಿ ಪ್ರತಿ ರಸ್ತೆಯಲ್ಲಿ ಅಂಚೆ ಡಬ್ಬಿಗಳನ್ನು ಇಟ್ಟರೂ, ಜನರು ಬಳಸುತ್ತಾರೆಯೇ ಎಂಬ ಸವಾಲನ್ನು ಆಫ್ಘಾನ್ ಅಂಚೆ ಸಂಸ್ಥೆೆ ಎದುರಿಸಬೇಕಿದೆ.