ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದರೆ ಕ್ರಮ

ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದರೆ ಕ್ರಮ

ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಚ್ಚರಿಕೆ

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಪ್ರಾಥಮಿಕ ಶಾಲೆಯಿಂದ ಹಿಡಿದು ಪಿಯುಸಿಯವರೆಗೆ ದಾಖಲಾತಿ ಪ್ರಮಾಣ ಹೆಚ್ಚಿಸಿಕೊಳ್ಳಬೇಕೆಂದು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸಮಿತಿಯವರಿಗೆ ಕ್ರಮ ವಹಿಸಲು ಸೂಚಿಸಿದ ಶಾಸಕ ಬಸವಂತಪ್ಪ

ದಾವಣಗೆರೆ, ಜು.7- ಕಟ್ಟಡ ನಿರ್ಮಿಸಿದರೆ ಕನಿಷ್ಠ 50 ವರ್ಷ ಬಾಳಿಕೆ ಬರಬೇಕು. ಇಲ್ಲದಿದ್ದರೆ ಸರ್ಕಾರದ ಹಣ ಪೋಲಾಗುತ್ತದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಕಟ್ಟಡ ನಿರ್ಮಿಸಬೇಕು. ಕಳಪೆ ಕಾಮಗಾರಿ ನಡೆಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತ್ಯಾವಣಿಗೆ ಗ್ರಾಮದಲ್ಲಿ ಶನಿವಾರ 80 ಲಕ್ಷ ರೂ. ವೆಚ್ಚದ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ  1.25 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

ಅವರು, ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೆಲವು ಶಾಲಾ ಕಟ್ಟಡಗಳಲ್ಲಿ ಕಳಪೆ ಕಾಮಗಾರಿ ನಡೆಸಿರುವುದು ಕಂಡು ಬಂದಿವೆ. ಇಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುದರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ಕಳಪೆ ಆಗದಂತೆ ಎಚ್ಚರಿಕೆ ವಹಿಸಬೇಕು. 50 ವರ್ಷ ಬಾಳಿಕೆ ಬರುವಂತೆ ಗುಣಮಟ್ಟದ ಕಟ್ಟಡ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಿಮ್ಮ ಊರಿನ ಶಾಲೆಯ ಕೊಠಡಿಗಳನ್ನು ನಿರ್ಮಿಸುತ್ತಿರುವುದರಿಂದ ಗ್ರಾಮಸ್ಥರು, ಎಸ್‍ಡಿಎಂಸಿ ಪದಾಧಿಕಾರಿಗಳು ಉಸ್ತುವಾರಿ ವಹಿಸಿಕೊಂಡು ಕಳಪೆ ಗುಣಮಟ್ಟದ ಕಟ್ಟಡ ಕಾಮಗಾರಿ ನಡೆಸದಂತೆ ನಿಗಾ ವಹಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ನಡೆಯುವುದು ಕಂಡು ಬಂದರೆ ಕೂಡಲೇ ಕೆಲಸ ಸ್ಥಗಿತಗೊಳಿಸಿ, ನನ್ನ ಗಮನಕ್ಕೆ ತನ್ನಿ. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಂಡು ಪುನಃ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿಸುತ್ತೇನೆ. ದಾನಿ ನೀಡಿದ ಜಾಗವನ್ನು ಕೂಡಲೇ ಖಾತೆ ಮಾಡಿಸಿಕೊಳ್ಳುವಂತೆ ಸ್ಥಳಕ್ಕೆ ತಹಶೀಲ್ದಾರ್ ಅವರನ್ನು ಕರೆಸಿ ಸೂಚನೆ ನೀಡಿದರು.

ಎಸ್‍ಡಿಎಂಸಿ ಸಮಿತಿ ಮತ್ತು ಶಾಲಾ ಶಿಕ್ಷಕರು ದಾನಿಗಳಿದ್ದರೆ ಅವರನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸಿದರೆ ಶಾಲೆಗೆ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಲು ಸಹಾಯವಾಗುತ್ತದೆ.

ಮಾಯಕೊಂಡ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಎಸ್‍ಡಿಎಂಸಿ ಸಮಿತಿಯವರು ಸರ್ಕಾರದ ಅನುದಾನ ಕಾಯದೆ ತಾವೇ ದಾನಿಗಳ ಬಳಿ ದೇಣಿಗೆ ಸಂಗ್ರಹಿಸಿ, ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಂಡಿದ್ದಾರೆ. ನೀವು ಕೂಡ ಇದೇ ರೀತಿ ದಾನಿಗಳಿಂದ ದೇಣಿಗೆ ಸಂಗ್ರಹಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಗೋವಿಂದ್ ಸಾಮಿಣ್ಣ, ಲೋಹಿತ್ ಅಣ್ಣ, ಗ್ರಾ.ಪಂ ಅಧ್ಯಕ್ಷ ಕರಬಸಣ್ಣ, ಕಾಂಗ್ರೆಸ್ ಮುಖಂಡ ದೊಡ್ಡಘಟ್ಟ ಬಾಳಣ್ಣ, ಗ್ರಾ.ಪಂ ಮಾಜಿ ಸದಸ್ಯರಾದ ಜಿ.ಪಿ.ಆಂಜನೇಯ, ರವಿಕುಮಾರ್ ನವಿಲಾಳ್, ಹಜರತ್ ಅಲಿ, ಗುತ್ತಿಗೆದಾರ ದೊಡ್ಡಘಟ್ಟ ಶಿವರಾಜ್, ಇಂಜಿನಿಯರ್ ಅಶೋಕ್,  ಶಾಲಾ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹಾಗೂ ಆಡಳಿತ ಸಿಬ್ಬಂದಿ, ಗ್ರಾಮಸ್ಥರು, ಮುಖಂಡರು ಭಾಗವಹಿಸಿದ್ದರು.

error: Content is protected !!