ಹರಿಹರ, ಜು. 7- ಹರಪನಹಳ್ಳಿಯ ಉಜ್ಜಯಿನಿ ಕಾಲೇಜು ಉಪನ್ಯಾಸಕ ಮಲ್ಲಿಕಾರ್ಜುನ ಅವರು ಅರಸೀಕೆರೆ ಗ್ರಾಮದ ತಿಮ್ಮಲಾಪುರ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಕೊಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಣೆ ಮಾಡಿ ಮಾತನಾಡಿದ ಉಪನ್ಯಾಸಕ ಮಲ್ಲಿಕಾರ್ಜುನ್ ಅವರು, ನಾವು ಚಿಕ್ಕವರಿದ್ದಾಗ ಸಾಕಷ್ಟು ಬಡತನ. ಆ ಸಮಯದಲ್ಲಿ ವಿದ್ಯಾಭ್ಯಾಸ ಮಾಡುವುದು ಬಹಳ ಕಷ್ಟವಾಗಿತ್ತು. ಆ ದಿನಗಳು ಈಗಿನ ವಿದ್ಯಾರ್ಥಿಗಳಿಗೆ ಬರಬಾರದು ಎಂಬ ದೃಷ್ಟಿಯಿಂದ ನನ್ನ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ಬಡ ವಿದ್ಯಾರ್ಥಿಗಳ ಏಳಿಗೆಗಾಗಿ ಸಮರ್ಪಣೆ ಮಾಡುತ್ತಿದ್ದೇನೆ ಎಂದರು.
ವಿದ್ಯಾರ್ಥಿಗಳು ಮುಂದೆ ದೊಡ್ಡ ಹುದ್ದೆಗೆ ಹೋದಾಗ ಬಡವರಿಗೆ ಸಹಾಯ, ಸಹಕಾರ ಮಾಡುವಂತಹ ಮನಸ್ಥಿತಿ ಬೆಳೆಸಿಕೊಂಡರೆ ನಾನು ಇವತ್ತು ಅವರಿಗೆ ಮಾಡಿದ ಅಲ್ಪ ಸೇವೆ ಸಾರ್ಥಕ ವಾಗುತ್ತದೆ ಎಂದು ಹೇಳಿದರು. ಈ ಸಂದ ರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ನರಸಿಂಹ, ಮುಖ್ಯ ಗುರುಗಳಾದ ಶಿವಮೂರ್ತಯ್ಯ, ಶಿಕ್ಷಕ ವೀರೇಶ್ ಅರಸೀಕೆರೆ ಹಾಜರಿದ್ದರು.