ದಾವಣಗೆರೆ, ಜ 5- ಹಾವೇರಿಯಲ್ಲಿ ನಾಳೆ ದಿನಾಂಕ 6, 7 ಮತ್ತು 8 ರಂದು ನಡೆಯಲಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಸಮ್ಮೇಳನದ ಕನಕ – ಷರೀಫ – ಸರ್ವಜ್ಞ ಪ್ರಧಾನ ವೇದಿಕೆಯು ಅದ್ಭುತವಾಗಿ ಸಿದ್ದಗೊಂಡಿದೆ. ಪ್ರಧಾನ ವೇದಿಕೆಯ ಮುಂಭಾಗದ ಸಭಾಂಗಣವು ಸುಮಾರು 50 ಸಾವಿರ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಹೊಂದಿದೆ. ಪ್ರಮುಖ ಸಭಾಂಗಣದ ಒಳಭಾಗದಲ್ಲಿ ಬೆಳಕು ಮತ್ತು ಗಾಳಿಯ ವ್ಯವಸ್ಥೆ ಸರಾಗವಾಗಿ ನಿರ್ಮಾಣಗೊಂಡಿದೆ.
ಜೊತೆಗೆ ಎರಡು ಸಮಾನಾಂತರ ವೇದಿಕೆ ಗಳನ್ನು ಸಿದ್ಧಪಡಿಸಲಾಗಿದ್ದು, ಒಂದೊಂದು ವೇದಿಕೆ ಗಳು ಸುಮಾರು 10,000 ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಒಳಗೊಂಡಿವೆ.
ಸಮ್ಮೇಳನಕ್ಕೆ ಬರುವ ಎಲ್ಲಾ ಸಾಹಿತ್ಯ ಅಭಿಮಾನಿಗಳಿಗೆ ಶುಚಿ ರುಚಿಯಾದ ಊಟದ ವ್ಯವಸ್ಥೆಯ ತಯಾರಿಯಲ್ಲಿ ಸಾವಿರಾರು ಜನ ತೊಡಗಿಸಿಕೊಂಡಿರುವುದು ಕಂಡುಬಂತು. ಎರಡು ದೊಡ್ಡ ಪುಸ್ತಕ ಭಂಡಾರಗಳ ಮಳಿಗೆಗಳು ನಿರ್ಮಾಣಗೊಂಡಿವೆ.
ಸಮ್ಮೇಳನಕ್ಕೆ ಬರುವವರಿಗೆ ಕುಡಿಯಲು ನೀರಿನ ವ್ಯವಸ್ಥೆಯ ಕೂಡ ಚೆನ್ನಾಗಿ ಮಾಡಲಾಗಿದೆ. ಸಮ್ಮೇಳನಕ್ಕೆ ಬರುವ ವಾಹನಗಳ ನಿಲುಗಡೆಗೆ ವಿಶಾಲವಾದ ಜಾಗವನ್ನು ವ್ಯವಸ್ಥೆ ಗೊಳಿಸಲಾಗಿದೆ.
ಸಮ್ಮೇಳನದ ಈ ಎಲ್ಲಾ ಸಿದ್ಧತೆಯನ್ನು ವೀಕ್ಷಿಸಲು ಇಂದು ಸಂಜೆ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಹಾಗೂ ಮಾಜಿ ಅಧ್ಯಕ್ಷ ಎ.ಆರ್.ಉಜ್ಜನಪ್ಪ, ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ ಹಾಗೂ ಸಂಘಟನಾ ಕಾರ್ಯದರ್ಶಿಯಾದ ಸಿ.ಜಿ.ಜಗದೀಶ್ ಕೂಲಂಬಿ ಅವರ ತಂಡ ಹಾವೇರಿಗೆ ತೆರಳಿ ಸಮ್ಮೇಳನದ ಎಲ್ಲಾ ಸಿದ್ಧತೆಗಳನ್ನು ವೀಕ್ಷಿಸಿತು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಸಮ್ಮೇಳನದ ಸಿದ್ಧತೆಯ ಎಲ್ಲಾ ಮಾಹಿತಿಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಮ್ಮೇಳನದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದ ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ದಾವಣಗೆರೆ ಜಿಲ್ಲಾ ಕಸಾಪ ತಂಡ ಭೇಟಿ ಮಾಡಿ ಸಿದ್ಧತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿತು.