ಶರಣ ಸಂಸ್ಕೃತಿ ಮರೆಯುತ್ತಿರುವ ಯುವ ಸಮೂಹ

ಶರಣ ಸಂಸ್ಕೃತಿ ಮರೆಯುತ್ತಿರುವ ಯುವ ಸಮೂಹ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಕಳವಳ

ದಾವಣಗೆರೆ, ಜು. 2- ಜಾಗತೀಕರಣದ ಭರಾಟೆಯಲ್ಲಿ ಸ್ಥಳೀಯ ಸಂಸ್ಕೃತಿ ಕ್ಷೀಣಿಸುತ್ತಿದ್ದು, ಶರಣ ಸಂಸ್ಕೃತಿಯನ್ನು ಯುವ ಸಮೂಹ ಮರೆಯುತ್ತಿದೆ. ಮಕ್ಕಳಿಗೆ ಆಸ್ತಿ ಮಾಡುವ, ಹಣ ಠೇವಣಿ ಇಡುವ ಅಗತ್ಯವಿಲ್ಲ. ಬದಲಾಗಿ ವಚನಗಳ ಅರಿವು ಮೂಡಿಸಿದರೆ ಸದ್ಗುಣಗಳ ಬೀಜ ಬಿತ್ತಿದಂತಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕರೂ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರೂ ಆದ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಹೇಳಿದರು.

ನಗರದ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಗುರು ಬಸವ ಮಂಟಪದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜನೆಗೊಂಡಿದ್ದ `ಫ.ಗು. ಹಳಕಟ್ಟಿಯವರ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ `ವಚನ ಸಂಸ್ಕೃತಿ ಮತ್ತು ಬದುಕು’ ಕುರಿತು ಅವರು ಮಾತನಾಡಿದರು.

ವಚನ ಸಂಗ್ರಹದಲ್ಲಿ ಫ.ಗು. ಹಳಕಟ್ಟಿಯವರ ಪಾತ್ರ ಅತ್ಯಂತ ಹಿರಿದು. ಹಳ್ಳಿ ಹಳ್ಳಿಗಳನ್ನು ಸುತ್ತಿ ವಚನಗಳನ್ನು ಹುಡುಕಿದ್ದಾರೆ. ವಚನ ಸಂಶೋಧನೆ ನಡೆಸಿ, ಅವುಗಳ ಸಂರಕ್ಷಣೆ ಮಾಡಿದ್ದಾರೆ. ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ವಚನಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆಂದು ತಿಳಿಸಿದರು.

1923 ರಲ್ಲಿ ವಚನ ಶಾಸ್ತ್ರ ಎಂಬ ಗ್ರಂಥವನ್ನು ಪ್ರಕಟಿಸಿದರು. 175 ಕ್ಕೂ ಹೆಚ್ಚು ವಚನ ಕೃತಿಗಳನ್ನು ರಚಿಸಿ, 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಫ.ಗು. ಹಳಕಟ್ಟಿಯವರದು. ಸುಮಾರು ಹತ್ತು ಸಾವಿರ ವಚನಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆಂದರು. ಶರಣರ ವಚನ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಹಳಕಟ್ಟಿಯವರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

ವಚನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯರಾಗಿ ಬಾಳಲು ಸಾಧ್ಯವಾಗುತ್ತದೆ. ಮನುಷ್ಯನಾಗಿ ಹುಟ್ಟಲು ಬಯಸುತ್ತೇವೆ. ಆದರೆ ಮನುಷ್ಯನಾಗಿ ಬಾಳಲು ಬಯಸುವುದಿಲ್ಲ. ನಡೆ-ನುಡಿಗಳಲ್ಲಿ ಸಮಾನತೆ ಕಾಯ್ದುಕೊಳ್ಳಬೇಕಾಗಿದೆ ಎಂದರು.

ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡ ಬೇಕಾಗಿದೆ. ಕಾಯಕ ಸಂಸ್ಕೃತಿಯಾಗಬೇಕಿದೆ. ಪಂಚಾಂಗಗಳ ಮೇಲೆ ಇಡುವ ನಂಬಿಕೆಗಿಂತ ಪಂಚ ಅಂಗಗಳ ಮೇಲೆ ನಂಬಿಕೆಯನ್ನಿಟ್ಟು. ವಚನ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಬದುಕಿನ ಉನ್ನತಿ ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ವಸ್ತ್ರದ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ರುದ್ರಗೌಡರು, ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತ ನಾಗರಾಜ್, ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ, ರೂಪ ಕುರುವತ್ತಿ, ಪ್ರೇಮಾ ಸೋಮಶೇಖರ್, ದೊಗ್ಗಳ್ಳಿ ಸುವರ್ಣಮ್ಮ, ಮಂದಾಕಿನಿ ಸ್ವಾಮಿ, ಸೌಮ್ಯ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಿ.ಟಿ. ಪ್ರಕಾಶ್ ವಚನ ಗೀತೆಗಳನ್ನು ಹಾಡಿದರು. ಖಜಾಂಚಿ ಆರ್. ಸಿದ್ದೇಶಪ್ಪ ನಿರೂಪಿಸಿದರು. ಚಂದ್ರಿಕಾ ಮಂಜುನಾಥ್ ಸ್ವಾಗತಿಸಿದರು. ಪೂರ್ಣಿಮಾ ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು ವಿಜಯ ಚಂದ್ರಶೇಖರ್ ಉಪನ್ಯಾಸಕರ ಪರಿಚಯ ಮಾಡಿದರು. ನಿರ್ಮಲಾ ಶಿವಕುಮಾರ್ ವಂದಿಸಿದರು.

error: Content is protected !!