ಚಿತ್ರದುರ್ಗ, ಜೂ. 24 – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷರೂ, ಪೌರ ಸೇವಾ ನೌಕರರ ಸಂಘದ ಮಾಜಿ ಅಧ್ಯಕ್ಷರೂ ಆದ ಆದಿ ಜಾಂಬವ ಸಮುದಾಯದ ನಾಯಕ ಜಿ.ಎಸ್.ಮಂಜುನಾಥ್ ಅವರು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಂಗಳೂರಿನ ಯೂನಿಟಿ ಬಿಲ್ಡಿಂಗ್‌ನಲ್ಲಿರುವ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಮಂಜುನಾಥ್ ಅವರು ಕಡತಕ್ಕೆ ಸಹಿ ಹಾಕುವುದರ ಮೂಲಕ ಅಧಿಕಾರ ಸ್ವೀಕರಿಸಿದರು.
ಮೂಲತಃ ಚಿತ್ರದುರ್ಗದವರಾದ ಮಂಜುನಾಥ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎಂ.ಸುಮಿತ್ರ ಆದೇಶ ಹೊರಡಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಂಠೀರವ ಸ್ಟುಡಿಯೋ ಅಧ್ಯಕ್ಷ ಮಹಮ್ಮದ್ ಪಾಷಾ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ಮಂಜುನಾಥ್, ಯುವ ಕಾಂಗ್ರೆಸ್ ಮುಖಂಡ ರವಿವರ್ಮ, ಬೈನರಿ ಅಪರಲ್ ಪಾರ್ಕ್‌ನ ಚೇರ್ಮನ್ ಕೆ.ಶ್ರೀನಿವಾಸ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದು, ಮಂಜುನಾಥ್ ಅವರನ್ನು ಅಭಿನಂದಿಸಿದರು.