ದಾವಣಗೆರೆ, ಜೂ. 23 – ಒಡಿಶಾದಿಂದ ಬೆಂಗಳೂರಿಗೆ ಬರುತ್ತಿದ್ದ ಟಾಟಾ ನಗರ ರೈಲಿನಲ್ಲಿ ಸಾಗಣೆ ಮಾಡುತ್ತಿದ್ದ 34 ಲಕ್ಷ ರೂ. ಮೌಲ್ಯದ 34 ಕೆ.ಜಿ. ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಸಮೀಪದಲ್ಲಿ ರೈಲು ಬೋಗಿಯನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಗಾಂಜಾ ಪತ್ತೆಯಾಗಿದೆ. 17 ಕೆ.ಜಿ. ತೂಕದ ಎರಡು ಚೀಲಗಳಲ್ಲಿ ತುಂಬಿದ್ದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಗಾಂಜಾವನ್ನು ಒಂದು ಬೋಗಿಯಲ್ಲಿಟ್ಟಿದ್ದ ಆರೋಪಿಗಳು ಮತ್ತೊಂದು ಬೋಗಿಯಲ್ಲಿ ಆಸೀನರಾಗಿದ್ದರು. ಪೊಲೀಸರು ಗಾಂಜಾ ಪತ್ತೆ ಮಾಡುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ದಾವಣಗೆರೆ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.