ಲಿಂಗಾಯತರಲ್ಲಿ ತಾತ್ವಿಕ ಹೊಂದಾಣಿಕೆ ಇಲ್ಲ

ಲಿಂಗಾಯತರಲ್ಲಿ ತಾತ್ವಿಕ ಹೊಂದಾಣಿಕೆ ಇಲ್ಲ

ಬಸವ ತತ್ವ ಶರಣ ಜಾಗೃತಿ ಕಾರ್ಯಾಗಾರದಲ್ಲಿ ಶಿವಾನಂದ ಶ್ರೀ ಗುರೂಜಿ ಅಭಿಮತ

ಚಿತ್ರದುರ್ಗ, ಜೂ.21- ಲಿಂಗಾಯತ ಧರ್ಮದಲ್ಲಿ ಇನ್ನೂ ತಾತ್ವಿಕ ಹೊಂದಾಣಿಕೆ ಇಲ್ಲ. ಆದ್ದರಿಂದ ಅರಿವಿನ ಕೊರತೆಗೆ ಮದ್ದನ್ನು ಕಂಡುಹಿಡಿದು ಜಾಗೃತಿ ಮೂಡಿಸುವ ಪ್ರಯತ್ನ ನಡೆಸ ಬೇಕಿದೆ ಎಂದು ಕುಂಬಳೂರಿನ ಬಸವ ಗುರುಕುಲದ ಮುಖ್ಯಸ್ಥರಾದ ಶ್ರೀ ಶಿವಾನಂದ ಗುರೂಜಿ ಅಭಿಪ್ರಾಯಪಟ್ಟರು.

ನಗರದ ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ  ಬಸವ ತತ್ವ ಶರಣ ಜಾಗೃತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.

ಬಸವ ಧರ್ಮದಲ್ಲಿ ಲಿಂಗಾಯತ ತತ್ವ ಇದೆ ಎನ್ನುವುದನ್ನು ಅರಿಯಬೇಕಿದೆ. ನಮ್ಮ ಆಚರಣೆಗಳು ಬಹುತೇಕ ಮೂಢನಂಬಿಕೆಯಿಂದ ಕೂಡಿದ್ದು, ನಾವು ಆಚರಿಸುವುದಲ್ಲದೇ ಬೇರೆಯವರಿಗೂ ಅದೇ ದಾರಿಗೆ ಕೊಂಡೊಯ್ಯುವ ಮೂಲಕ ಅಂಧ ಸಂಪ್ರದಾಯಕ್ಕೆ ಶರಣಾಗಿರುವುದರಿಂದ ತತ್ವ ಪ್ರಚಾರಕ್ಕೆ ಅಡಚಣೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 

ಮುರುಘರಾಜೇಂದ್ರ ಮಹಾಲಿಂಗೇಶ್ವರ ಮಠದ ಬಸವಲಿಂಗ ಮೂರ್ತಿ ಶ್ರೀಗಳು ಮಾತನಾಡಿ, 12ನೇ ಶತಮಾನದ ಕ್ರಾಂತಿ ಕೇವಲ ಧರ್ಮ ಜಾಗೃತಿ ಆಗಿರದೇ ಸಾಮಾಜಿಕ ಸಮಾನತೆ ತರುವ ಪ್ರಜಾಪ್ರಭುತ್ವವಾದಿ ಜಾಗೃತಿಯ ಆಂದೋಲನವಾಗಿತ್ತು.

ಹಾಗಾಗಿ ಬಸವಾದಿ ಶರಣರ ವಿಚಾರ ಧಾರೆಗಳು ಕೇವಲ ಭಾರತಕ್ಕಷ್ಟೇ ಸೀಮಿತವಾಗದೇ, ವಿಶ್ವಕ್ಕೇ ತಲುಪಲು ಸಾಧ್ಯವಾಯಿತು ಎಂದರು.

ಕಲಬುರ್ಗಿ ಮರುಳಶಂಕರ ಗುರು ಪೀಠದ ಸಿದ್ಧಬಸವ ಕಬೀರ ಶ್ರೀಗಳು ಮಾತನಾಡಿ, ಲಿಂಗಾಯತರಲ್ಲಿ ಸಹಕಾರ ಭಾವನೆ ಇದೆ. ಆದರೆ ನಿಷ್ಠೆ ಹಾಗೂ ಏಕದೇವೋಪಾಸನೆ ಇರದ ಕಾರಣ ಅನೇಕ ತೊಡಕುಗಳು ಇವೆ ಎಂದರು.

ಬಸವಣ್ಣನವರು ಹೇಳಿದ ಹಾಗೆ ಅಂತರಂಗ, ಬಹಿರಂಗ ಶುದ್ಧಿಯ ಕೆಲಸ ಆಗಬೇಕಿದೆ. ಅದಕ್ಕಾಗಿ ತತ್ವ ಪ್ರಚಾರಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ
ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಶ್ರೀಗಳು, ಎಲ್ಲಿಯ ತನಕ ಅನುಭಾವಿಗಳಿಗೆ ಸಿಗಬೇಕಾದ ಗೌರವ, ಮನ್ನಣೆ ಸಿಗುವುದಿಲ್ಲವೋ, ಅಲ್ಲಿಯತನಕ ಧರ್ಮದ ಏಳಿಗೆ ಅಸಾಧ್ಯ ಎಂದು ಹೇಳಿದರು.

ಬಸವ ತತ್ವ ಸಮಾವೇಶದ ಸಂಘಟಕರಾದ ತಿಪ್ಪೇರುದ್ರ ಶ್ರೀಗಳು ಸೇರಿದಂತೆ, ಧಾರವಾಡ, ಹಿರೇಹೊನ್ನಿಹಳ್ಳಿ ಬಸವ ಮಂಟಪ ಚನ್ನಬಸವ ಶ್ರೀಗಳು, ಮುರುಘಾಮಠ ಗುರುಕುಲದ ಉಪನ್ಯಾಸಕ ಕಡೂರಿನ ಜಿ.ವಿ. ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!