ಹರಪನಹಳ್ಳಿ : ಗುಣಮಟ್ಟದ ಕಾಮಗಾರಿಗೆ ಸಹಕಾರ ನೀಡಲು ಶಾಸಕರಾದ ಲತಾ ಕರೆ

ಹರಪನಹಳ್ಳಿ : ಗುಣಮಟ್ಟದ ಕಾಮಗಾರಿಗೆ ಸಹಕಾರ ನೀಡಲು ಶಾಸಕರಾದ ಲತಾ ಕರೆ

ಹರಪನಹಳ್ಳಿ, ಜೂ.20- ಜನಸಾಮಾನ್ಯರು ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಕೊಡದೇ ಗುಣಮಟ್ಟದ ಕಾಮಗಾರಿಗಳಿಗೆ ಸಹಕಾರ ನೀಡಿ ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮೈಕ್ರೋ ಯೋಜನೆ ಅಡಿಯಲ್ಲಿ ಅನುಮೋದನೆಗೊಂಡ ಪಟ್ಟಣದ ವಿವಿಧ ಕಾಲೇಜುಗಳಿಗೆ  ರಸ್ತೆ ಅಭಿವೃದ್ಧಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮಿಸುತ್ತಿದ್ದು, ಈಗಾಗಲೇ 80 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕೆಲಸಗಳು ಆಗಿವೆ. ಮುಂದೆಯೂ ಸಹ ಹೆಚ್ಚಿನ ಅಭಿವೃದ್ಧಿ ಆಗಲು ಸಹಕರಿಸಿ ಎಂದು ಹೇಳಿದರು.

ಹೊಸಪೇಟೆಯಲ್ಲಿ ನಾಳೆ ದಿನಾಂಕ 21ರ ಶುಕ್ರವಾರ ಜರುಗುವ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದು, ತಾಲ್ಲೂಕಿನ ಬಹು ನಿರೀಕ್ಷಿತ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜು ಕಾಮಗಾರಿ ಮುಗಿಸಲು ಹೆಚ್ಚಿನ ಅನುದಾನ ನೀಡುವಂತೆ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಆಲಿಸಿ ಸ್ಪಂದಿಸುತ್ತೇನೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಎಇಇ ಪ್ರಕಾಶ್‌ ಪಾಟೀಲ್ ಮಾತನಾಡಿ, 2.91 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಲೇಜುಗಳ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಪಟ್ಟಣದ ಅಭಿವೃದ್ಧಿಗೆ 15 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ಸೇರಲು ವಿಶೇಷ ಕಾಳಜಿ ವಹಿಸಿ ಎಲ್ಲ ವರ್ಗದ ಜನರಿಗೆ ಉಪಯೋಗವಾಗಲು ದಿ. ಎಂ.ಪಿ. ರವೀಂದ್ರರವರೇ ಕಾರಣ ಎಂದು ತಿಳಿಸಿದರು.

ಗ್ಯಾರಂಟಿಗಳಿಗೆ ಹಣ ಮೀಸಲಾಗಿದೆ ಎಂದು ವಿರೋಧ ಪಕ್ಷದವರು ಮಾತನಾಡುತ್ತಿದ್ದಾರೆ. ಆದರೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ ಎಂದು ಹೇಳಿದರು.

ಸಾರ್ವಜನಿಕರು ಕಾಮಗಾರಿಗಳ ಗುಣಮಟ್ಟ ನೋಡಬೇಕು ಎಂದ ಅವರು, ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಕಾಣದ ಪಟ್ಟಣಕ್ಕೆ ಅಭಿವೃದ್ಧಿ ಸ್ಪರ್ಷವನ್ನು ಶಾಸಕರಾದ ಲತಾ ಮಲ್ಲಿಕಾರ್ಜುನ್‌ ಅವರು ನೀಡಿದ್ದಾರೆ ಎಂದು ಹೇಳಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವ ರಾಜ, ಪುರಸಭಾ ಸದಸ್ಯರಾದ ಟಿ. ವೆಂಕಟೇಶ್, ಲಾಟಿ ದಾದಾಪೀರ್, ಪೈಲ್ವಾನ್ ಗಣೇಶ, ಗೊಂಗಡಿ ನಾಗರಾಜ, ಶೋಭಾ, ಪುರಸಭೆ ಮಾಜಿ ಸದಸ್ಯೆ ಕವಿತಾ ಸುರೇಶ್‌, ಮುಖಂಡರಾದ ಗುಂಡಗತ್ತಿ ಕೊಟ್ರಪ್ಪ, ಇಸ್ಮಾಯಿಲ್ ಎಲಿಗಾರ್ ಸೇರಿದಂತೆ ಇತರರಿದ್ದರು.

error: Content is protected !!