ಜಗಳೂರಿನಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
ಜಗಳೂರು, ಜೂ. 13 – ಸಾರ್ವಜನಿಕರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸದೇ ಸಕಾಲದಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ಕೆಲಸ ನಿರ್ವಹಿಸಬೇಕು ಎಂದು ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪುರೆ ಅವರು ತಾಲ್ಲೂಕು ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಸಾರ್ವಜನಿಕರ ಅರ್ಜಿಗಳಬಗ್ಗೆ ವಿಳಂಬನೀತಿ ಅನುಸರಿಸಿದರೆ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದರು. ಕೆರೆ ಒತ್ತುವರಿ, ಕೆರೆಗಳಲ್ಲಿ ಹೂಳೆತ್ತುವ ನೆಪದಲ್ಲಿ ಭಾರೀ ಗಾತ್ರದ ಜೆಸಿಬಿ ಯಂತ್ರದಿಂದ ಅಕ್ರಮ ಮಣ್ಣು ಮತ್ತು ಹಳ್ಳಗಳಲ್ಲಿ ಅಕ್ರಮ ಮರಳು ಸಾಗಾಟಗಳ ವಿರುದ್ದ ತಹಶೀಲ್ದಾರ್ ಅಗತ್ಯ ಕ್ರಮವಹಿಸಿ ಕಡಿವಾಣ ಹಾಕಬೇಕು ಹಾಗೂ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್‌ವುಲ್ಲಾ ಅವರಿಗೆ ಸೂಚಿಸಿದರು.
ಶಾಲೆಗಳು ಆರಂಭವಾಗಿದ್ದು, ಮಕ್ಕಳಿಗೆ ಕೊಠಡಿಗಳ ಸಮಸ್ಯೆ, ಶಿಕ್ಷಕರ ಸಮಸ್ಯೆ ಕುರಿತು ಮಾಹಿತಿ ಪಡೆದರು. ಬಿಇಓ ಹಾಲಮೂರ್ತಿ ಪ್ರತಿಕ್ರಿಯಿಸಿ, ತಾಲ್ಲೂಕಿನಲ್ಲಿ ಒಟ್ಟು 273 ಸರ್ಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ 64 ಸರ್ಕಾರಿ ಶಾಲೆಗಳ ದುರಸ್ಥಿಗೆ ರೂ. 1.66 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಂದ ಅಧಿಕ ಅರ್ಜಿಗಳು ಸ್ವೀಕೃತವಾಗದ ಕಾರಣ ಸಭೆಯನ್ನು ಮುಕ್ತಾಯಗೊಳಿಸಿ ಅಧಿಕಾರಿಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್ ಕಲೀಂವುಲ್ಲಾ, ತಾ.ಪಂ ಪ್ರಭಾರಿ ಇಓ ಮಿಥುನ್ ಕಿಮಾವತ್, ಪೊಲೀಸ್ ನಿರೀಕ್ಷಕ ಶ್ರೀನಿವಾಸ ರಾವ್, ಲೋಕಾಯುಕ್ತ ಪಿಎಸ್ಐ ಪ್ರಭು ಸೂರಿನ, ಪಿಎಸ್ ಐ ಆಶಾ, ಸಿಡಿಪಿಓ ಬೀರೇಂದ್ರ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಬಿಆರ್‌ಸಿಡಿಡಿ ಹಾಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.