70 ವಿದ್ಯಾರ್ಥಿನಿಯರಿಗೆ ನ್ಯಾಪ್‍ಕಿನ್ ವಿತರಣೆ

70 ವಿದ್ಯಾರ್ಥಿನಿಯರಿಗೆ ನ್ಯಾಪ್‍ಕಿನ್ ವಿತರಣೆ

ಮಲೇಬೆನ್ನೂರು, ಜೂ. 13- ಶಾಲೆಗಳು ದೇವಾಲಯಗಳಂತೆ ಕಂಗೊಳಿಸಲು ವಿದ್ಯಾರ್ಥಿಗಳು ಪರಿಶ್ರಮದಿಂದ ಪ್ರತಿಭೆ ಹೊರ ಹಾಕಬೇಕು ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥರಾದ ಅರುಣಾ ದಿವಾಕರ್ ಅಭಿಪ್ರಾಯಪಟ್ಟರು.

ಕುಂಬಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೃತಗ್ಯತಾ ಟ್ರಸ್ಟ್ ‍ನಿಂದ ನಿರ್ಮಿಸಿದ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರತಿ ಮಗುವಿನಲ್ಲಿ ಅಪಾರ ಶಕ್ತಿ ಇರುತ್ತದೆ.ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆ ಸಮೀಪ ಬಂದಾಗ ಅಭ್ಯಾಸ ಒಳ್ಳೆಯದಲ್ಲ ಎಂದರು. ಶಾಲಾ – ಕಾಲೇಜು ಸಾಮಾಜಿಕ ಆಸ್ತಿಯಾಗಿದ್ದು, ಇವು ನಮ್ಮದು ಎಂಬ ಭಾವನೆ ಬಂದಾಗ ಎಲ್ಲವೂ ಸುಂದರವಾಗಿರುತ್ತದೆ.      ಸಾಧನೆಗೆ ಕಷ್ಟ ಅಡ್ಡಿಯಾಗ ಬಾರದು, ಕಷ್ಟದಿಂದ ಸಾಧನೆ ಸಾಧ್ಯವಿದೆ. ನಿಮಗೆ ನೀವೇ ಮಾನಸಿಕವಾಗಿ ಸ್ಟ್ರಾಂಗ್ ಆಗಬೇಕು. ಆಗ ನಿಮ್ಮ ಹಾದಿ ರಾಜ ಮಾರ್ಗವಾಗುತ್ತದೆ ಎಂದು ಅರುಣಾ ಸ್ಫೂರ್ತಿಯ ಮಾತುಗಳನ್ನಾಡಿದರು.

ಸಿಬಿಸಿ ಸದಸ್ಯ ಹೆಚ್.ಎಂ ಸದಾನಂದ ಮಾತನಾಡಿ, ಕೃತಗ್ಯತಾ ಟ್ರಸ್ಟ್‍ನಿಂದ ಕಳೆದ ವರ್ಷಕ್ಕೆ ಹರಿಹರ ತಾಲ್ಲೂಕಿನ ಸರ್ಕಾರಿ ಶಾಲೆಯ ಅರವತ್ತು ಸಾವಿರ ಬಡ ಮಕ್ಕಳಿಗೆ ನಲಿ-ಕಲಿ ಪೀಠೋಪಕರಣ ಗಳು, ಶೌಚಾಲಯ, ಕ್ರೀಡಾ ಸಾಮಗ್ರಿಗಳು, ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿ, ನ್ಯಾಪ್‍ಕಿನ್‍ಗ ಳು, ನೋಟ್ ಬುಕ್‍ಗಳನ್ನು ವಿತರಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಹನುಮಂತಯ್ಯ ಮಾತನಾಡಿ, ಮಾನಸಿಕ ಸಂಕಲ್ಪಗಳು ದೈವದ ಹಾದಿಯನ್ನು ತೆರೆಯುತ್ತವೆ, ವಿಕೃತಿಗಳು ದೈವವನ್ನು ಸ್ವೀಕರಿಸಲ್ಲ, ವಿದ್ಯಾರ್ಥಿಗಳು ಕೀಳರಿಮೆ ತೊರೆದು, ಶಿಕ್ಷಣ, ಮೌಲ್ಯವನ್ನು ರೂಢಿಸಿಕೊಂಡು ಶ್ರಮ ವಹಿಸಿ ಮೇಲೆ ಬರಬೇಕು ಎಂದರು. 

ಎಸ್‍ಡಿಎಂಸಿ ಸದಸ್ಯ ಡಿ. ಕರಿಬಸಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೇ. 92 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹತ್ತನೇ ತರಗತಿಯ ಐವರು ವಿದ್ಯಾರ್ಥಿಗಳಿಗೆ ತಲಾ 5001 ರೂ ನೀಡುವುದಾಗಿ ಭರವಸೆ ನೀಡಿದರು.

 ಸಿಬಿಸಿ ಸದಸ್ಯರಾದ ಎನ್. ಕಲ್ಲೇಶ್, ಬೆನ್ನೂರು ರಮೇಶ್, ಎಸ್.ಶಾರದಾ, ಮಾಜಿ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಎಸ್‍ಡಿಎಂಸಿ ಅಧ್ಯಕ್ಷ ಮಾಗಾನಹಳ್ಳಿ ಪರಮೇಶ್ವರಪ್ಪ, ಬೋಧಕ ವರ್ಗದವರು  ಇದ್ದರು. ಡೈರಿ ಉಪಾಧ್ಯಕ್ಷ ಚಿಕ್ಕಣ್ಣ, ಮುಖ್ಯ ಶಿಕ್ಷಕ ಗೋವಿಂದಪ್ಪ, ಶಿಕ್ಷಕರಾದ ನಾಗವೇಣಿ, ಕೆ.ಆರ್.ಮಂಜುನಾಥ್ ಮಾತನಾಡಿದರು. ವಿದ್ಯಾರ್ಥಿನಿ ಯಶೋಧ, ಅನುಷಾ ಅನಿಸಿಕೆ ಹೇಳಿದರು. ಈ ವೇಳೆ 70 ವಿದ್ಯಾರ್ಥಿನಿಯರಿಗೆ ನ್ಯಾಪ್‍ಕಿನ್ ವಿತರಿಸಲಾಯಿತು.

error: Content is protected !!