ಹರಿಹರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ ಕೆ.ಎಸ್. ಭಗವಾನ್
ಹರಿಹರ, ಜೂ.9- ದಲಿತರು ತಮ್ಮ ಉದ್ಧಾರಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ನಡೆದುಕೊಂಡರೆ, ಸಂವಿಧಾನವನ್ನು ಗೌರವಿಸಿದಂತೆ ಆಗುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ ಕೆ.ಎಸ್. ಭಗವಾನ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಬೈಪಾಸ್ ಬಳಿ ಇರುವ ಮೈತ್ರಿ ವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹರಿಹರ ತಾಲ್ಲೂಕು ಘಟಕ ವತಿಯಿಂದ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಪ್ರೊ ಬಿ. ಕೃಷ್ಣಪ್ಪ ನವರ 86 ನೇ ಜನ್ಮದಿನ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಒಳಿತಿಗಾಗಿ ಸಂವಿಧಾನ ರಚಿಸಿ, ವಿಶ್ವ ನಾಯಕರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಪ್ರೀತಿ, ಆತ್ಮಗೌರವ, ಸ್ವಾಭಿಮಾನವಿದ್ದರೆ ದಲಿತರು ಹಿಂದೂ ಧರ್ಮವನ್ನು ಬದಿಗಿಟ್ಟು, ಬೌದ್ಧ ಧರ್ಮ ಅಪ್ಪಿಕೊಳ್ಳಬೇಕು ಎಂದರು.
ದೇಶದ ಜನರ ಒಳಿತಿಗಾಗಿ ಸಂವಿಧಾನ ರಚಿಸಿ ಆ ಮೂಲಕ ಬಡವರಿಗೆ ಮತ್ತು ಶೋಷಿತ ವರ್ಗದವರನ್ನು ಮುನ್ನಲೆಗೆ ತರುವ ಕೆಲಸ ಮಾಡಿದ್ದರಿಂದ, ವಿಶ್ವಮಟ್ಟದಲ್ಲಿ ಅಂಬೇಡ್ಕರ್ ಹೆಸರು ಮುನ್ನೆಲೆಗೆ ಬರುವಂತಾಯಿತು ಎಂದು ಹೇಳಿದರು.
ಅಂಬೇಡ್ಕರ್‌ಗೆ ಅಪಾರ ಜ್ಞಾನ ಮತ್ತು ಪಾಂಡಿತ್ಯ ಇದ್ದಿದ್ದರಿಂದ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು, ಪ್ರತಿಯೊಬ್ಬರೂ ಸ್ವತಂತ್ರವಾಗಿ ಮತ್ತು ಸಹೋದರತ್ವದಿಂದ ಬಾಳಬೇಕು, ಜನರಲ್ಲಿ ಯಾವುದೇ ರೀತಿಯ ಬೇದಭಾವನೆಗಳು ಬರದಂತೆ ಎಲ್ಲರೂ ಒಗ್ಗಟ್ಟಿನಿಂದ ಇರುವುದನ್ನು ರೂಢಿಸಿಕೊಂಡು ಹೋಗಬೇಕೆಂಬ ಮನೋಭಾವ ಅಂಬೇಡ್ಕರ್‌ದಾಗಿತ್ತು ಎಂದು ಹೇಳಿದರು.
ಪ್ರೊ. ಬಿ. ಕೃಷ್ಣಪ್ಪ ಅಪರೂಪದ ವ್ಯಕ್ತಿ. ದೊಡ್ಡ ವಿದ್ವಾಂಸರೂ ಆಗಿದ್ದವರು, ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕದೇ ಇದ್ದಿದ್ದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೆಸರು ಇಷ್ಟೊಂದು ಮುನ್ನಲೆಗೆ ಬರಲಿಕ್ಕೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.
ಕೃಷ್ಣಪ್ಪನವರು ಕಾಲೇಜು ಪ್ರಾಧ್ಯಾಪಕರಾಗಿದ್ದರೂ, ಹಳ್ಳಿಯಲ್ಲಿ ವಾಸಿಸುವ ಬಡ ಜನರ ಬದುಕನ್ನು ನೋಡಿ ಅವರನ್ನು ಮೇಲೆ ತರುವ ಕೆಲಸ ಮಾಡಿದರು. ಇದರಿಂದಾಗಿ ಕರ್ನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಆಯಿತು ಎಂದು ಹೇಳಿದರು.
ಶೂದ್ರರು ಎಂದರೆ ಎಸ್ಸಿ, ಎಸ್ಟಿ ಮಾತ್ರ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಲಿಂಗಾಯತ, ಕುರುಬರು, ಒಕ್ಕಲಿಗ ಸೇರಿದಂತೆ ಹಲವು ಜನಾಂಗದವರು ಶೂದ್ರರೇ, ಜನಿವಾರ ಹಾಕಿದವರನ್ನು ಬಿಟ್ಟು ಉಳಿದೆಲ್ಲ ಜನಾಂಗದವರು ಶೂದ್ರರರು ಎನ್ನುವಂತೆ ಭಾಸವಾಗುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯೂ ಆತ್ಮವಿಶ್ವಾಸವನ್ನು ಬೆಳಸಿಕೊಂಡರೆ ಯಾರಿಗೂ ಹೆದರುವ ಅವಶ್ಯಕತೆ ಇರೋಲ್ಲ. ದಲಿತರು ಮಕ್ಕಳಿಗೆ ವಿದ್ಯೆ ನೀಡಬೇಕು. ಅಕ್ಷರಾಭ್ಯಾಸ ಮಾಡಿಸಿದರೆ ಗುಲಾಮಗಿರಿ ಯಿಂದ ಹೊರಗಡೆ ಬರಲಿಕ್ಕೆ ಸಾಧ್ಯವಿದೆ. ಜಾತಿ ಅನುಗುಣವಾಗಿ ಮೀಸಲಾತಿ ಕೊಡಲಿಕ್ಕೆ ನಮ್ಮ ವಿರೋಧ ಇಲ್ಲ. ಆ ನಿಟ್ಟಿನಲ್ಲಿ ಮೀಸಲಾತಿ ನೀಡಿದಾಗ ದೇಶದ ಎಲ್ಲರೂ ನೆಮ್ಮದಿ ಯಿಂದ ಬದಕಬಹುದು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಶಿವಮೊಗ್ಗ ಎಂ. ಗುರುಮೂರ್ತಿ ಮಾತನಾಡಿ, ದಲಿತರಿಗೆ ಸಮಾನತೆ ಸಿಗಲಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಧರ್ಮ ಬಿಟ್ಟರೆ, ದಲಿತರಿಗೆ ಕಣ್ಣಾಗಬೇಕು ಎಂದು ತಮ್ಮ ಪ್ರಾಂಶುಪಾಲ ಹುದ್ದೆಯನ್ನು ಬಿಟ್ಟವರು ಪ್ರೊ. ಬಿ. ಕೃಷ್ಣಪ್ಪನವರು.
ತಮಗೆ ಬರುವ ಸಂಬಳ ಇಟ್ಕೊಂಡು ಉತ್ತಮ ಜೀವನ ಮಾಡಬಹುದಿತ್ತು. ಆದರೆ ದಲಿತರ ಮೇಲೆ ನಡೆಯುವ ಶೋಷಣೆ, ಅತ್ಯಾಚಾರ, ದೌರ್ಜನ್ಯ, ಹಿಂಸೆ ಬಗ್ಗೆ ಯಾವುದೇ ವ್ಯಕ್ತಿ ಮಾತನಾಡದ ಸಮಯದಲ್ಲಿ ಧ್ವನಿಯಾಗಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ನಂತರ ರಾಜ್ಯದಾದ್ಯಂತ ವಿವಿಧ ನಗರದಲ್ಲಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು. ತಳ ಸಮುದಾಯದ ಏಳಿಗೆಗಾಗಿ ಚಿಂತನೆ ಮಾಡಿ, ಅವರ ಪರ ಹೋರಾಟಕ್ಕೆ ಮುಂದಾಗಿದ್ದರು ಎಂದು ಶ್ಲ್ಯಾಘಿಸಿದರು.
ಪ್ರೊ. ಬಿ. ಕೃಷ್ಣಪ್ಪ ನವರು ಬೆತ್ತಲೆ ಸೇವೆ, ಮೌಢ್ಯಗಳನ್ನು, ಅಮಾನವೀಯ ನಡವಳಿಕೆಯನ್ನು ತಿರಸ್ಕರಿಸಿ, ಮಹಿಳೆಯರಿಗೆ ನ್ಯಾಯ ಕೊಡಿಸುವಂತಹ ಕೆಲಸ ಮಾಡಿದರು ಎಂದು ತಿಳಿಸಿದರು.
ಆರೋಗ್ಯ ಮಾತೆ ಚರ್ಚ್ ಧರ್ಮಗುರುಗಳಾದ ಜಾರ್ಜ್ ಮಾತನಾಡಿ, ಶೋಷಣೆ, ಅಜ್ಞಾನವನ್ನು ಹೋಗಲಾಡಿಸಲು ಪ್ರೊ. ಕೃಷ್ಣಪ್ಪ ಹಚ್ಚಿದ ದೀಪ ಸದಾ ಕಾಲವೂ ಬೆಳಗುವಂತೆ ನೋಡಿಕೊಂಡು ಹೋಗಬೇಕು ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ರಾಯಚೂರು ಹನುಮಂತಪ್ಪ ಕಾಕಗರ್ಲ್, ಚಿಕ್ಕಬಳ್ಳಾಪುರ ಬಿ.ಎನ್. ಗಂಗಾಧರಪ್ಪ, ಮಂಡ್ಯ ವೆಂಕಟೇಶ ನಾಗಮಗಲ, ಬೆಳಗಾವಿ ರಮೇಶ್ ಎಸ್ ಮಾದರ, ಖಜಾಂಚಿ ಶಿವಮೊಗ್ಗ ಬಿ.ಎ. ಕಾಟ್ಕೆ, ಮಹಿಳಾ ಘಟಕದ ರಾಜ್ಯ ಸಂಚಾಲಕಿ ರತ್ನಮ್ಮ, ಎಸ್ ಪಕ್ಕಿರಪ್ಪ, ಸಿ.ಬಿ. ನಂಜುಂಡಪ್ಪ, ಸಾವಿತ್ರಮ್ಮ, ಶಿವಮೊಗ್ಗ ಶಿವಬಸಪ್ಪ, ಕಮಲಮ್ಮ, ಕುಂದುವಾಡ ಮಂಜುನಾಥ್, ಸಿದ್ದರಾಮಣ್ಣ, ಚೌಡಪ್ಪ ಭಾನುವಳ್ಳಿ ಇತರರು ಹಾಜರಿದ್ದರು.
ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಹರ ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಪಿ.ಜೆ. ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.