ಮಲೇಬೆನ್ನೂರಿನ ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿಮರದ ಅಭಿಮತ
ಮಲೇಬೆನ್ನೂರು, ಜೂ.2- ಶಿಕ್ಷಕರ ಸಮಸ್ಯೆಗಳಿಗೆ ಡಿ.ಟಿ. ಶ್ರೀನಿವಾಸ್ ಅವರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಪರಿಹಾರ ಒದಗಿಸಲಿದ್ದಾರೆಂಬ ನಂಬಿಕೆ ನಮಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ, ಬೀರಲಿಂಗೇಶ್ವರ ಪ್ರೌಢಶಾಲೆ, ಸರ್ಕಾರಿ ಉರ್ದು ಪ್ರೌಢಶಾಲೆ, ಜಾಮೀಯಾ ನ್ಯಾಷನಲ್ ಪ್ರೌಢಶಾಲೆ ಸೇರಿದಂತೆ, ವಿವಿಧ ಶಾಲಾ-ಕಾಲೇಜುಗಳಲ್ಲಿ ವಿಧಾನ ಪರಿಷತ್ ಚುನಾವಣೆಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಪರ ಮತ ಯಾಚನೆ ಮಾಡಿ ಮಾತನಾಡಿದರು.
ಸರ್ಕಾರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ಸಿಕ್ಕಾಗ ಮಾತ್ರ ಶಾಲೆಗಳಿಗೆ ಮತ್ತು ಶಿಕ್ಷಕರಿಗೆ ಸಿಗಬೇಕಾದ ಸೌಕರ್ಯಗಳು ಸಹಜವಾಗಿಯೇ ಸಿಗುತ್ತವೆ ಎಂದು ಅಭಿಪ್ರಾಯಪಟ್ಟ ಸೋಮಣ್ಣ ಅವರು, ಶಿಕ್ಷಕ ವೃತ್ತಿ ಅತ್ಯಂತ ಪ್ರಾಮಾಣಿಕವಾಗಿದ್ದು, ಶಿಕ್ಷಕ ವೃತ್ತಿಗೆ ಸರ್ಕಾರ ಇತರೆ ನೌಕರರಿಗೆ ನೀಡುವ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಬೇಕೆಂದು ಶಿಕ್ಷಕರ ಮಾತಿಗೆ ಧ್ವನಿಗೂಡಿಸಿದರು.
ಆರು ರಾಜ್ಯಗಳ ಗಡಿಯನ್ನು ಹೊಂದಿರುವ ನಮ್ಮ ರಾಜ್ಯದ ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಪ್ರಾರಂಭವಾಗಲಿದೆ ಎಂದು ಸೋಮಣ್ಣ ಬೇವಿನಮರದ ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ ಮಾತನಾಡಿ, ಶಿಕ್ಷಕರು ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ನಿಜ. ಶಿಕ್ಷಕರನ್ನು ಇತರೆ ನೌಕರರಂತೆ ಗೌರವಿಸುವ ಕೆಲಸವನ್ನು ಈ ಸರ್ಕಾರ ಮಾಡುವ ವಿಶ್ವಾಸವಿದೆ. ಈ ಸರ್ಕಾರಿ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹಾಕುವುದಾಗಿ ಮತ್ತು ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಶಾಲಾ ಶಿಕ್ಷಕರಿಗೆ ಶಾಲಾ ಸಮಯಕ್ಕೆ ಅನುಕೂಲವಾಗುವಮತೆ ಬಸ್ ಸೌಲಭ್ಯ ವನ್ನು ಸಾರಿಗೆ ಸಚಿವರಿಗೆ ಹೇಳಿ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸದಾಶಿವ ಅವರು, ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಏನೇ ನಿರ್ಧಾರ ಕೈಗೊಳ್ಳುವ ಮೊದಲು ಶಿಕ್ಷಕರ ಅಭಿಪ್ರಾಯ ಕೇಳುವಂತಾಗಬೇಕು. ಶಿಕ್ಷಕರ ಮೇಲಿನ ಗೌರವ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದಕ್ಕೆ ಇಲಾಖೆಯೇ ನೇರ ಹೊಣೆ ಎಂದರು. ನಮ್ಮನ್ನು ಇತರೆ ನೌಕರರಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಉಪ ಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ್, ಶಿಕ್ಷಕ ರಾಮಣ್ಣ ಸೋಮಣ್ಣನವರ್ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಓ.ಜಿ. ಮಂಜುನಾಥ ಅವರು, ಪಾಳು ಬಿದ್ದಿರುವ ಬಾಪೂಜಿ ಹಾಲ್ ಅನ್ನು ಅಭಿವೃದ್ಧಿಪಡಿಸಿ ಇಲ್ಲವೇ ಒಡೆದು ಹಾಕಿ. ಏಕೆಂದರೆ ಇಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಗಳಿ ಆನಂದಪ್ಪ, ತಾಲ್ಲೂಕು ಕುರುಬರ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ. ವೀರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಲ್.ಬಿ. ಹನುಮಂತಪ್ಪ, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಬಿ. ರಾಜಶೇಖರ್, ಗುತ್ತೂರು ಹಾಲೇಶಗೌಡ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ. ಮಂಜುನಾಥ, ನಯಾಜ್, ಷಾ ಅಬ್ರಾರ್, ಸಾಬೀರ್ ಅಲಿ, ಭಾನುವಳ್ಳಿ ಸುರೇಶ್, ಎಂ.ಬಿ. ರುಸ್ತುಂ, ಪಿಎಸಿಎಸ್ ಮಾಜಿ ಅಧ್ಯಕ್ಷ ಪಿ. ಆರ್. ಕುಮಾರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್. ಶಿವಕುಮಾರ್, ಹಾಲಿವಾಣದ ಕೆ. ರೇವಣಸಿದ್ಧಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ ಮತ್ತಿತರರು ಈ ವೇಳೆ ಇದ್ದರು.