ಕವಿಗಳ ಸಂಖ್ಯೆ ಕ್ಷೀಣಿಸಿದರೆ, ಮನೋರೋಗಿಗಳು ಹೆಚ್ಚಳ

ಕವಿಗಳ ಸಂಖ್ಯೆ ಕ್ಷೀಣಿಸಿದರೆ, ಮನೋರೋಗಿಗಳು ಹೆಚ್ಚಳ

`ಪ್ರತಿಭೆ ಮತ್ತು ಕಲಾಭಿವ್ಯಕ್ತಿ’ ವಿಷಯ ಕುರಿತು ಡಾ. ಮಹಾಂತೇಶ್ ಪಾಟೀಲ್‌ ಉಪನ್ಯಾಸ


ಕವಿಗಳ ಸಾಧನೆಗೆ ಸಿಗುವ ಗೌರವ, ಚಿತ್ರ ಕಲಾವಿದರ ಸಾಧನೆಗೆ ಸಿಗದಿರುವುದು ಶೋಚನಿಯವಾಗಿದೆ.

– ಡಾ. ಮಹಾಂತೇಶ ಪಾಟೀಲ್‌


ದಾವಣಗೆರೆ, ಮೇ 30- ಸಮಾಜದಲ್ಲಿ ಕವಿಗಳ ಸಂಖ್ಯೆ ಕಡಿಮೆಯಾದರೆ, ಮನೋರೋಗಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದಾವಣಗೆರೆ ವಿವಿಯ ಕನ್ನಡ ಅಧ್ಯಯನ ವಿಭಾಗದ ಡಾ. ಮಹಾಂತೇಶ್ ಪಾಟೀಲ್‌ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ  ನಡೆಯುತ್ತಿರುವ `ಭಿತ್ತಿಚಿತ್ರ ಕಲಾ ಶಿಬಿರ’ದಲ್ಲಿ ಗುರುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ `ಪ್ರತಿಭೆ ಮತ್ತು ಕಲಾಭಿವ್ಯಕ್ತಿ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಒಬ್ಬ ವ್ಯಕ್ತಿಯ ವಿಶಿಷ್ಟ ಶಕ್ತಿಯೇ ಪ್ರತಿಭೆ ಆಗಿದೆ. ಕವಿ ಮತ್ತು ಕಲಾವಿದರಲ್ಲಿನ ಪ್ರತಿಭೆ ಸಾಮಾನ್ಯ ಪ್ರತಿಭೆಗಿಂತ ವಿಶೇಷವಾದುದು ಎಂದು ಹೇಳಿದರು.

ಇಂದಿನ ದಿನಮಾನಗಳಲ್ಲಿ ಸಾಹಿತ್ಯ ಮತ್ತು ಕಲೆಗಿರುವ ಬೇಡಿಕೆ ಕ್ಷೀಣಿಸುತ್ತಿದ್ದು, ಇವುಗಳ ಬಗ್ಗೆ ಜನರಲ್ಲಿ ಅಜ್ಞಾನದ ಚಟುವಟಿಕೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಮಾನಸಿಕ ಸ್ಥಿತಿ ಉತ್ತಮವಾಗಿಸುವ ನಿಟ್ಟಿನಲ್ಲಿ ಕಲೆ ಹಾಗೂ ಕಾವ್ಯದ ಅಭ್ಯಾಸವನ್ನು ಶಿಕ್ಷಣದಲ್ಲಿ ಕಡ್ಡಾಯ ಗೊಳಿಸಿದ್ದಾರೆ ಎಂದರು.

ಸಾಹಿತ್ಯಕ್ಕೆ ಮನ ಪರಿವರ್ತನೆ ಮಾಡುವ ವಿಶೇಷ ಗುಣವಿದೆ. ಆದರೆ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಜೋತುಬಿದ್ದ ಮಕ್ಕಳು, ಭಾವನೆ ಮತ್ತು ಮಾನವೀಯತೆ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸಮಾಜದಲ್ಲಿ ಅಹಿತಕರ ಘಟನೆ ನಡೆಯುತ್ತಿವೆ ಎಂದರು.

ಸಮಾಜದಲ್ಲಿ ಉತ್ತಮ ಆಲೋಚನೆ ಹಾಗೂ ಸ್ವಾಸ್ಥ್ಯ ಮನಸ್ಥಿತಿಯಿಂದ ಬದುಕಲು ಕಲಾ ಮತ್ತು ಸಾಹಿತ್ಯ ಬಹುಮುಖ್ಯವಾಗಿದೆ, ಇದನ್ನೇ ನಿರಾಕರಿಸಿದರೆ ಮನುಷ್ಯ ಕ್ರೂರಿ ಆಗುತ್ತಾನೆ ಎಂದು ಹೇಳಿದರು.

ಎ.ವಿ.ಕೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ ಮಾತನಾಡಿ, ಕವಿ ತನ್ನ ಕಾವ್ಯದ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರೆ, ದೃಶ್ಯಕಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮೂಲಕ ಸಮಾಜ ಸುಧಾರಿಸಬೇಕು ಎಂದು ಹೇಳಿದರು.

ಯುವಕರು ಹೃದಯವಂತಿಕೆ ಜತೆಗೆ  ಅನ್ಯಾಯ ಕಂಡರೆ ಪ್ರತಿಭಟಿಸುವ ಗುಣ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವಕರನ್ನು ಪ್ರಜ್ಞಾವಂತರನ್ನಾಗಿಸುವ ಸಾಮರ್ಥ್ಯ  ಎನ್ನೆಸ್ಸೆಸ್  ಶಿಬಿರಕ್ಕಿದೆ ಎಂದು ತಿಳಿಸಿದರು.

ಈ ವೇಳೆ ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್‌ ಎಂ. ಚಿಕ್ಕಪಾಟೀಲ್‌, ಶಿಬಿರಾಧಿಕಾರಿ ಡಾ. ಸತೀಶ್‌ ಕುಮಾರ್‌ ಪಿ. ವಲ್ಲೇಪುರೆ, ಸಹ ಶಿಬಿರಾರ್ಥಿ  ಡಾ.ಎಂ.ಕೆ. ಗಿರೀಶ್‌ ಕುಮಾರ್‌, ಬೋಧನಾ ಸಹಾಯಕರಾದ ಡಾ. ಸಂತೋಷ ಕುಮಾರ್‌ ಕುಲಕರ್ಣಿ, ದತ್ತಾತ್ರೇಯ ಎನ್‌. ಭಟ್‌, ಅರುಣ್, ನವೀನ್‌ ಹಾಗೂ ವಿದ್ಯಾರ್ಥಿಗಳು ಇದ್ದರು.

ಶಾರದಾ ಪ್ರಾರ್ಥನೆ ಮಾಡಿದರು. ಶಂಕರಪ್ಪ ಸ್ವಾಗತಿಸಿದರು.

error: Content is protected !!