ಹಾವೇರಿ ಸಮಾನ ಮನಸ್ಕರ ನಡೆ ಹಾಸನದತ್ತ ಆರೋಪಿ ಬಂಧಿಸಿ, ಶಿಕ್ಷೆಗೊಳಪಡಿಸಬೇಕು

ಹಾವೇರಿ ಸಮಾನ ಮನಸ್ಕರ ನಡೆ ಹಾಸನದತ್ತ ಆರೋಪಿ ಬಂಧಿಸಿ, ಶಿಕ್ಷೆಗೊಳಪಡಿಸಬೇಕು

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ವಿರುದ್ಧ ಕಿಡಿ ಕಾರಿದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ

ಹಾವೇರಿ,ಮೇ 28- ಸಂಸದ ಪ್ರಜ್ವಲ್ ರೇವಣ್ಣ, ತನ್ನ ರಾಜಕೀಯ  ಅಧಿಕಾರ ದುರ್ಬಳಕೆ,  ಕುಟುಂಬದ ದರ್ಪ, ಹಣ ಮತ್ತು ಜಾತಿ ಪ್ರಾಬಲ್ಯದ ಕಾರಣದಿಂದ ನೂರಾರು ಮಹಿಳೆಯರನ್ನು   ದುರುಪಯೋಗಪಡಿಸಿಕೊಂಡಿರುವ ಹಗರಣ ಬೆಳಕಿಗೆ ಬಂದು ತಿಂಗಳಾದರೂ ಆರೋಪಿಯ ಬಂಧನವಾಗಿಲ್ಲ ಇದು ಖಂಡನೀಯ, ಕೂಡಲೇ ಬಂಧಿಸುವಂತೆ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.

ಸಮಾನ ಮನಸ್ಕ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಾಸನದಲ್ಲಿ ನಾಡಿದ್ದು ದಿನಾಂಕ 30 ರಂದು ನಡೆಯುವ ರಾಜ್ಯಮಟ್ಟದ ಹೋರಾಟದ ಪೋಸ್ಟರ್‌ಗಳನ್ನು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಿ ಪೂಜಾರ ಮಾತನಾಡಿದರು.

ವಿಕೃತ ಲೈಂಗಿಕ ಹಗರಣದ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್ ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮೂಲಕ ಹಂಚಿದ ಮತ್ತು ಅವುಗಳನ್ನು ಸಂಗ್ರಹಿಸಿಕೊಂಡು ಮಹಿಳೆಯರ ಖಾಸಗಿತನ, ಕುಟುಂಬ ಮತ್ತು ಬದುಕಿನ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬರನ್ನೂ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಪೂಜಾರ ಒತ್ತಾಯಿಸಿದರು.

  ಹಗರಣದಲ್ಲಿ   ಲೈಂಗಿಕ ದುರ್ಬಳಕೆಗೆ ಒಳಗಾಗಿ ರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೋಪ್ಯತೆ ಕಾಪಾಡಲು ಅವರಿಗೆ ಬೇಕಾದ ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ‌ ಒದಗಿಸುವಂತೆ ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಸಿ. ಅಕ್ಷತಾ ಒತ್ತಾಯಿಸಿದರು.

ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ ನಿಷ್ಪಕ್ಷಪಾತ ವಾಗಿ ತನಿಖೆ ನಡೆಸುವಂತೆ ಹಾಗೂ ಅವರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸಲು ಅವಶ್ಯ ಅನುಕೂಲ ಹಾಗೂ ಅಧಿಕಾರವನ್ನು ರಾಜ್ಯ ಸರ್ಕಾರ ಕೊಡಬೇಕು ಎಂದು ಒತ್ತಾಯಿಸಲಾಯಿತು. 

ಸಭೆಯಲ್ಲಿ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಬಸವರಾಜ ಹಾದಿಮನಿ, ಬಸವರಾಜ ಶೆಟ್ಟಿ, ವಿಭೂತಿ ನಾಯಕ, ಅಶೋಕ ಮರೆಣ್ಣನವರ, ಎನ್.ಆರ್.ಅಬಲೂರ, ಸಿದ್ದು ಮರೆಮ್ಮನವರ, ಲಕ್ಷ್ಮಣ ಕೆಂಗಳಪ್ಪನವರ ಮತ್ತಿತರರಿದ್ದರು.

error: Content is protected !!