ಹೊನ್ನಾಳಿ: ವಿದ್ಯಾರ್ಥಿಗಳ ಶ್ರಮದಾನ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಧನಂಜಯ
ಹೊನ್ನಾಳಿ, ಮೇ 27- ಸ್ವಚ್ಛತೆಯೇ ದೇವರು, ಸ್ವಚ್ಚತೆಯಿಂದಿದ್ದರೆ ಮಾತ್ರ ರೋಗ-ರುಜಿನಗಳಿಂದ ದೂರವಿರಬಹುದು. ವಿದ್ಯಾರ್ಥಿಗಳು ತಮ್ಮ- ತಮ್ಮ ಮನೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಮುಂದಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ತಿಳಿಸಿದರು.
ಇಲ್ಲಿನ ಟಿ.ಬಿ. ವೃತ್ತದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್. ವಿದ್ಯಾರ್ಥಿಗಳು ಬಿಡುವಿನ ವೇಳೆ ಯಲ್ಲಿ ಸ್ವಯಂಪ್ರೇರಿತವಾಗಿ ಕಾಲೇಜಿನ ಸುತ್ತ ಮುತ್ತಲೂ ಸ್ವಚ್ಛ ಮಾಡುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ತಮ್ಮ ಮನೆಯ ಅಕ್ಕ-ಪಕ್ಕದಲ್ಲೂ ಸ್ವಚ್ಛತೆಯ ಕೆಲಸವನ್ನು ನಿಯಮಿತವಾಗಿ ಮಾಡಬೇಕು, ಸ್ವಚ್ಛತೆಯಿಂದಾಗಬಹುದಾದ ಉಪಯೋಗಗಳನ್ನು ಮನೆಯ ಸದಸ್ಯರಿಗೂ ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ಮಳೆಗಾಲ ಪ್ರಾರಂಭವಾಗುತ್ತಿದ್ದು, ಅನೇಕ ಮಾರ ಣಾಂತಿಕ ಸಾಂಕ್ರಾಮಿಕ
ರೋಗಗಳು ಹರಡುತ್ತವೆ, ಆದ್ದರಿಂದ ಪುರಸಭೆ ಮತ್ತು ಗ್ರಾಪಂ ಸಿಬ್ಬಂದಿಗಳೇ ಬಂದು ಸ್ವಚ್ಛ ಮಾಡಲಿ ಎಂದು ನಿರ್ಲಕ್ಷ್ಯ ಮಾಡದೇ ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಮತ್ತು ಮನೆಗಳ ಸುತ್ತಮುತ್ತಲೂ ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಕಾಲೇಜಿನಲ್ಲಿ ನುರಿತ ಉಪನ್ಯಾಸಕರ ತಂಡವಿದ್ದು ಇದರಿಂದ ಪ್ರತೀ ವರ್ಷವೂ ಒಳ್ಳೆಯ ಫಲಿತಾಂಶ ಬರುತ್ತಿದ್ದು, ಎಲ್ಲಾ ಕೋರ್ಸ್‍ಗಳಿಂದ ಒಟ್ಟು 1052 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ.
ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್‍ಗಳಿಗೆ ಅರ್ಜಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಪ್ರಾಧ್ಯಾಪಕ ಡಿ.ಸಿ.ಪಾಟೀಲ್, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಸ್.ಹರೀಶ್, ಉಪನ್ಯಾಸಕರಾದ ಕೊಟ್ರೇಶ್ ಬೆಳ್ಳುಳ್ಳಿ, ಜಿ.ಎನ್.ಧನಂಜಯ ಮೂರ್ತಿ, ಗ್ರಂಥಪಾಲಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಎಂ.ನಾಗರಾಜ್ ನಾಯ್ಕ್, ಅತಿಥಿ ಉಪನ್ಯಾಸಕ ಡಿ.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.