ಹರಿಹರದ ಕೆಹೆಚ್‌ಬಿ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿವಾಸಿಗಳ ಆಗ್ರಹ

ಹರಿಹರದ ಕೆಹೆಚ್‌ಬಿ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿವಾಸಿಗಳ ಆಗ್ರಹ

ಹರಿಹರ, ಮೇ 26 –  ನಗರದ ಹೊಸ ಕೋರ್ಟ್ ಹಿಂಬದಿಯ ಕೆ.ಹೆಚ್.ಬಿ. ಕಾಲೋನಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು. ನಗರಸಭೆಯ ಅಧಿಕಾರಿಗಳು ಆದಷ್ಟು ಬೇಗನೆ ಸಮಸ್ಯೆಯನ್ನು ಪರಿಹರಿಸಲು ಮುಂದಾಗುವಂತೆ ಕೆ.ಹೆಚ್.ಬಿ. ಕಾಲೋನಿ ನಿವಾಸಿಗಳಾದ ಎಸ್. ಸತೀಶ್ ಹುಲಸೂರು, ಎರಿಸ್ವಾಮಿ, ರಾಮಕೃಷ್ಣ ಶರ್ಮ ಇತರರು ಆಗ್ರಹಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ  ಪತ್ರಿಕಾಗೋಷ್ಠಿ ಯಲ್ಲಿ ಎಸ್. ಸತೀಶ್ ಹುಲಸೂರು ಮಾತನಾಡಿ,  ಕೆ.ಹೆಚ್.ಬಿ. ಕಾಲೋನಿ ನಿರ್ಮಾಣಗೊಂಡು 14 ವರ್ಷ ಕಳೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ವಾಸವಾಗಿದ್ದಾರೆ.  ಸಮರ್ಪಕ  ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಚರಂಡಿ, ಪಾರ್ಕ್, ವಿದ್ಯುತ್ ದ್ವೀಪದ ಸೌಲಭ್ಯ ಒದಗಿಸುವಲ್ಲಿ ನಗರಸಭೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಾಲೋನಿಯಲ್ಲಿರುವ ನೀರಿನ ಟ್ಯಾಂಕನ್ನು ಹಲವಾರು ವರ್ಷಗಳಿಂದ ಸ್ವಚ್ಚತೆ ಮಾಡಿರುವುದಿಲ್ಲ. ಯುಜಿಡಿ ಕಾಮಗಾರಿ ಮಾಡಿದ್ದರೂ ಕೆಲವೊಂದು ಮನೆಗಳಲ್ಲಿ ಚರಂಡಿ ನೀರು ವಾಪಸ್‌ ಬರುತ್ತದೆ. ರಸ್ತೆಗಳಿಗೆ ಪ್ರತಿವರ್ಷ ಮಣ್ಣು ಹಾಕಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಲಕ್ಷಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ  ಉಂಟುಮಾಡುತ್ತಿದ್ದಾರೆ. 24/7 ಕುಡಿಯುವ ನೀರಿನ ಪೈಪ್ ಲೈನ್ ಕೆಲವೊಂದು ಮನೆಗಳಿಗೆ ಮಾತ್ರ ಹಾಕಿ, ಉಳಿದಂತೆ ಎಲ್ಲಾ ಮನೆಗಳಿಗೆ ಸಂಪರ್ಕವನ್ನು ನೀಡದೇ ಇರುವುದರಿಂದ ನೀರಿನ ಸಮಸ್ಯೆ ಬಹಳಷ್ಟಿದೆ.  

ಜಾಲಿ ಗಿಡಗಳು ಎಲ್ಲೆಂದರಲ್ಲಿ ಬೆಳೆದಿದ್ದು ಹಾವು, ಚೇಳು ಸೇರಿದಂತೆ ಅನೇಕ ಹುಳ ಉಪ್ಪಡಿಗಳ ತಾಣವಾಗಿದೆ. ಬೀದಿ ನಾಯಿಗಳು, ಹಂದಿಗಳ ಉಪಟಳ ಹೇಳ ತೀರದಾಗಿದೆ. ಹಿರಿಯ ನಾಗರಿಕರಿಗೆ ವಿಶ್ರಾಂತಿ ಸೌಕರ್ಯದ ಜೊತೆಗೆ ಮಕ್ಕಳಿಗೆ ಆಟದ ಮೈದಾನ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಪಿ. ಹರೀಶ್ ಮತ್ತು ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಗಮನಕ್ಕೆ ತರಲಾಯಿತು. 

ಆದರೆ, ಇಲ್ಲಿನ ಬಡಾವಣೆ ನಗರಸಭೆ ವ್ಯಾಪ್ತಿಗೆ ಇತ್ತೀಚಿನ ದಿನಗಳಲ್ಲಿ ಸೇರಿರುವುದರಿಂದ ಬಡಾವಣೆಯನ್ನು ಅಭಿವೃದ್ಧಿ ಪಡಿಸಲು ಹಣದ ಕೊರತೆಯ ಕಾರಣ ಯಾವುದೇ ರೀತಿಯ ಅಭಿವೃದ್ಧಿ ಮಾಡಲಿಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. 

ಸಿದ್ದಲಿಂಗಸ್ವಾಮಿ, ರಾಮಕೃಷ್ಣ ಶರ್ಮ, ಹೆಚ್.ಎಂ‌. ವೀರಯ್ಯ ಇತರರು ಮಾತನಾಡಿದರು.

ಹೆಚ್. ನಿಜಗುಣ, ರಾಮಮೂರ್ತಿ, ರಾಜೇಶ್, ರೇವಣಸಿದ್ದಪ್ಪ ಅಮರಾವತಿ, ಪ್ರದೀಪ್ ತೇಲ್ಕರ್, ಮಹಾಂತೇಶ್, ಚಂದ್ರಶೇಖರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!