ಹರಿಹರ, ಮೇ 24- ನಗರದಲ್ಲಿ ಹಲವು ತಿಂಗಳ ಹಿಂದೆ ಮಾಡಿರುವ ಕಾಮಗಾರಿ ಬಿಲ್ ಪಾವತಿಸುವಲ್ಲಿ ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಆದಷ್ಟು ಬೇಗನೆ ಗುತ್ತಿಗೆದಾರರ ಬಿಲ್ ಪಾವತಿಸುವಂತೆ ಆಗ್ರಹಿಸಿ, ಗುತ್ತಿಗೆದಾರರಾದ ಭಾನುವಳ್ಳಿ ದಾದಾಪೀರ್, ದಾದಾ ಖಲಂದರ್, ಜಗದೀಶ್ ನಗರಸಭೆಯ ಮುಂದೆ ಇಂದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಗುತ್ತಿಗೆದಾರ ಹಾಗೂ ನಗರಸಭೆ ಸದಸ್ಯ ದಾದಾ ಖಲಂದರ್ ಮಾತನಾಡಿ, ನಗರದಲ್ಲಿ 14 ನೇಯ ಹಣಕಾಸು, 13ನೇಯ ಹಣಕಾಸು, ನಗರೋತ್ಥಾನ, 18ನೇ ಹಣಕಾಸು ಸೇರಿದಂತೆ ಹಲವು ಬಗೆಯ ಯೋಜನೆಯ ಅಡಿಯಲ್ಲಿ ಬರುವಂತ ಕಾಮಗಾರಿಗಳಾದ ಚರಂಡಿ, ರಸ್ತೆ, ವಿದ್ಯುತ್, ಕುಡಿಯುವ ನೀರು ಇನ್ನೂ ಮುಂತಾದ ಕಾಮಗಾರಿಗಳನ್ನು ಗುತ್ತಿಗೆದಾರರು, ಈಗಾಗಲೇ ಹಲವು ತಿಂಗಳ ಕೆಳಗೆ ಕಾಮಗಾರಿ ಮಾಡಿ ಮುಗಿಸಿದ್ದರು. ಇದುವರೆಗೂ ನಗರಸಭೆಯ ಅಧಿಕಾರಿಗಳು ಗುತ್ತಿಗೆದಾರರ ಬಿಲ್ ಪಾವತಿ ಮಾಡುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ಐಗೂರು ಬಸವರಾಜ್ ಅವರೆಗೆ ಅನೇಕ ಬಾರಿ ಗಮನಕ್ಕೆ ತಂದರೂ ಸಹ ಅವರು ಇಲ್ಲಿನ ಎಇಇ ತಿಪ್ಪೇಸ್ವಾಮಿ ಮತ್ತು ಇಂಜಿನಿಯರ್ ಮಂಜುನಾಥ್ ಹಾಗೂ ಮಂಜುಳಾ ಅವರು ಪೂರ್ಣಪ್ರಮಾಣದ ಕಾಮಗಾರಿ ಆಗಿರುವುದರ ಬಗ್ಗೆ ದಾಖಲೆಗಳನ್ನು ಒದಗಿಸುವಲ್ಲಿ ತಡ ಮಾಡಿದ್ದರಿಂದ ಜಿಲ್ಲಾಧಿಕಾರಿಗಳು ಹಣ ಬಿಡುಗಡೆ ಮಾಡುವಲ್ಲಿ ತಡವಾಗಿದೆ ಎಂದು ಹೇಳುತ್ತಾ ದಿನ ಕಳೆಯುತ್ತಿದ್ದಾರೆ.
ಆದ್ದರಿಂದ ಗುತ್ತಿಗೆದಾರರಿಗೆ ಇದುವರೆಗೂ ಮಾಡಿರುವ ಕಾಮಗಾರಿಗಳಿಗೆ ಲಾಭವನ್ನು ಮಾಡುವುದಕ್ಕಿಂತ ನಷ್ಟವೇ ಹೆಚ್ಚು ಆಗುತ್ತಿದೆ. ಆಗಾಗಿ ಜಿಲ್ಲಾಧಿಕಾರಿಗಳು ಆದಷ್ಟು ಬೇಗನೇ ಹರಿಹರ ನಗರದ ಗುತ್ತಿಗೆದಾರರು ಮಾಡಿರುವ ಕಾಮಗಾರಿ ಬಿಲ್ ಪಾವತಿಸಲು ಮುಂದಾಗಬೇಕಿದೆ ಒಂದು ವೇಳೆ ಇನ್ನು ವಿಳಂಬ ನೀತಿಯನ್ನು ಅನುಸರಿಸಿದರೆ ನಗರಸಭೆಯ ಮುಂದೆ ಸತ್ಯಾಗ್ರಹ ಮಾಡುವ ಮೂಲಕ ಇನ್ನೂ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಗುತ್ತಿಗೆದಾರ ಜಗದೀಶ್ ಮಾತನಾಡಿ, ಗುತ್ತಿಗೆದಾರರ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮನವಿಯನ್ನು ಮಾಡಲಾಗಿತ್ತು. ಆದರೆ, ಮನವಿಯನ್ನು ಕೊಟ್ಟು ನಾಲ್ಕು ದಿನವಾದರು ಇದುವರೆಗೂ ಒಂದು ಕಾಮಗಾರಿ ಬಿಲ್ ಪಾವತಿಸಲು ಇಲ್ಲಿನ ಅಧಿಕಾರಿಗಳು ಮುಂದಾಗುತ್ತಿಲ್ಲ. ಆದ್ದರಿಂದ ಇವತ್ತು ಅನಿವಾರ್ಯವಾಗಿ ನಗರಸಭೆಯ ಮುಂದೆ ಕುಳಿತುಕೊಂಡು ಪ್ರತಿಭಟನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಇನ್ನು ಮುಂದೆ ನಿರ್ಲಕ್ಷ್ಯ ಮಾಡುತ್ತಾ ಸಾಗಿದರೆ ನಗರಸಭೆ ಮುಂಭಾಗದಲ್ಲಿ ಎಲ್ಲಾ ಗುತ್ತಿಗೆದಾರರು ಟೆಂಟ್ ಹಾಕುವ ಮೂಲಕ ಇನ್ನೂ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್, ಗುತ್ತಿಗೆದಾರರಾದ ಭಾನುವಳ್ಳಿ ದಾದಾಪೀರ್, ಜಿ.ನಂಜಪ್ಪ, ಉಮೇಶ್, ರಾಘವೇಂದ್ರ, ರಡ್ಡಿ, ಹನಗವಾಡಿ, ನಗರಸಭೆ ಸದಸ್ಯ ಹನುಮಂತಪ್ಪ ಇತರರು ಹಾಜರಿದ್ದರು.