ಚಿತ್ರದುರ್ಗ ಮುರುಘಾಮಠದಲ್ಲಿ ಲಿಂ. ಶ್ರೀ ಜಯವಿಭವ ಸ್ವಾಮೀಜಿ ಸ್ಮರಣೋತ್ಸವದಲ್ಲಿ ಹಿರಿಯ ವಿದ್ವಾಂಸ ಡಾ.ಬಿ.ರಾಜಶೇಖರಪ್ಪ
ದಿವ್ಯವಾದ ಜೀವನ
‘ದೀರ್ಘಕಾಲದ ಜೀವನಕ್ಕಿಂತ ದಿವ್ಯವಾದ ಜೀವನಕ್ಕೆ ಸಾಕ್ಷಿಯಾಗ ಬೇಕು. ಈ ನಿಟ್ಟಿನಲ್ಲಿ ಜಯವಿಭವ ಶ್ರೀಗಳೇ ಉತ್ತಮ ಉದಾಹರಣೆ’
– ಶ್ರೀ ಬಸವಪ್ರಭು ಸ್ವಾಮೀಜಿ
ಚಿತ್ರದುರ್ಗ, ಮೇ 19 – ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ದೇಶ ರಕ್ಷಣೆಗಾಗಿ ತಮ್ಮ ಬಂಗಾರದ ಕಿರೀಟ, ದಪ್ಪನೆಯ ಉಂಗುರಗಳು, ಸಹಸ್ರಾರು ರೂ.ಗಳ ಕಾಣಿಕೆಯನ್ನು ಅರ್ಪಿಸುವ ಮೂಲಕ ಲಿಂಗೈಕ್ಯ ಶ್ರೀ ಜಯವಿಭವ ಸ್ವಾಮಿಗಳು ದೇಶಾಭಿಮಾನ ಮೆರೆದವರು ಎಂದು ಹಿರಿಯ ವಿದ್ವಾಂಸ ಡಾ. ಬಿ. ರಾಜಶೇಖರಪ್ಪ ಸ್ಮರಿಸಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಜರುಗಿದ ಲಿಂ. ಜಗದ್ಗುರು ಶ್ರೀ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿ ಗಳವರ ಸ್ಮರಣೋತ್ಸವದಲ್ಲಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.
ಶ್ರೀ ಜಯದೇವ ಸ್ವಾಮಿಗಳವರ ಉತ್ತರಾಧಿ ಕಾರಿಗಳಾಗಿ ಬಂದವರು ಶ್ರೀ ಜಯವಿಭವ ಸ್ವಾಮಿಗಳು. ಇವರ ಮೂಲ ಹೆಸರು ಶಿವಲಿಂಗ ಮಹಾದೇವರು. ಇವರು ಕಾಶಿಗೆ ಉನ್ನತ ಅಭ್ಯಾಸಕ್ಕೆ ತೆರಳಿ ವೇದೋಪನಿಷತ್ತು, ಆಗಮಗಳನ್ನು ಕಲಿತರು. ಚಿತ್ರದುರ್ಗಕ್ಕೆ ಬಂದ ನಂತರ ಜಯದೇವ ಸ್ವಾಮಿಗಳು ಅವರನ್ನು ಜಯವಿಭವ ಸ್ವಾಮಿಗಳು ಎಂದು ನಾಮಕರಣ ಮಾಡುತ್ತಾರೆ. ಹಿರಿಯ ಜಗದ್ಗುರುಗಳಿಗೆ ಇವರ ಮೇಲೆ ವಿಶೇಷ ಆಸಕ್ತಿ ಇತ್ತು. 1949ರಲ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ, 1956ರಲ್ಲಿ ಜಯದೇವ ಜಗದ್ಗುರುಗಳು ಲಿಂಗೈಕ್ಯರಾದ ನಂತರ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದರು.
ಜಯವಿಭವ ಶ್ರೀಗಳು ವೇದ, ವೇದಾಂತ, ಸಕಲ ಶಾಸ್ತ್ರ ಅಭ್ಯಾಸ ಮಾಡಿದವರು. ಸಂಯಮ ಶೀಲರು, ಮಿತಭಾಷಿಗಳಾಗಿದ್ದರು. ಬೂಟಾಟಿಕೆ ಇರಲಿಲ್ಲ. ಷಟ್ಸ್ಥಲ ಸಿದ್ಧಾಂತವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. 6 ಭಾಷೆಗಳು ತಿಳಿದಿದ್ದವು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾಗಿ ಭಾಷಾ ಪಾಂಡಿತ್ಯ ಇತ್ತು. ಧರ್ಮ, ಸಮಾಜವನ್ನು ಹೇಗೆ ಕೊಂಡೊಯ್ಯಬೇಕೆಂದು ಚಿಂತಿಸುತ್ತಿದ್ದರು ಎಂದು ನುಡಿದರು.
ಶ್ರೀಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶ್ರೀಗಳ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದರು.
ಸಾನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮಿ ಗಳು ಮಾತನಾಡಿ, ದೀರ್ಘಕಾಲದ ಜೀವನಕ್ಕಿಂತ ದಿವ್ಯವಾದ ಜೀವನಕ್ಕೆ ಸಾಕ್ಷಿಯಾಗಬೇಕು. ಈ ನಿಟ್ಟಿನಲ್ಲಿ ಜಯವಿಭವ ಶ್ರೀಗಳೇ ಉತ್ತಮ ಉದಾಹರಣೆ. ದೇಶಕ್ಕಾಗಿ ಶ್ರೀಮಠದ ಸಂಪತ್ತನ್ನು ನೀಡಿದವರು ಶ್ರೀಗಳು ತುಂಬಾ ಸಾತ್ವಿಕರಿದ್ದರು. ಅವರಂತೆ ನಾವೆಲ್ಲ ಸಾತ್ವಿಕ ಜೀವನ ನಡೆಸಬೇಕಿದೆ ಎಂದು ಹೇಳಿದರು.
ಇದಕ್ಕು ಮುನ್ನ ಶ್ರೀಗಳ ಸ್ಮರಣೆ ಅಂಗ ವಾಗಿ ಮುಂಜಾನೆ ಕರ್ತೃ ಗದ್ದುಗೆಯಲ್ಲಿ ವಚ ನಾಭಿಷೇಕ ನಡೆಯಿತು. ನಂತರ ಶ್ರೀ ಜಗ ದ್ಗುರು ಜಯವಿಭವ ಮಹಾಸ್ವಾಮಿಗಳ ಕಲ್ಪ ವೃಕ್ಷ ವನದ ಮಹಾದ್ವಾರವನ್ನು ಜಯದೇವ ವಿದ್ಯಾರ್ಥಿನಿಲಯದ ಮಾಜಿ ವ್ಯವಸ್ಥಾಪಕರು ಹಾಗು ಶ್ರೀಮಠದ ಏಜೆಂಟರಾಗಿ ಸೇವೆ ಸಲ್ಲಿಸಿದ ಎಸ್.ಮಲ್ಲಯ್ಯ ಉದ್ಘಾಟಿಸಿದರು.
ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶರಣೆ ಅಕ್ಕನಾಗಮ್ಮ ತಾಯಿ, ಸುರೇಶ್ಬಾಬು, ಕೆಇಬಿ ಷಣ್ಮುಖಪ್ಪ, ಎಸ್. ಮಲ್ಲಯ್ಯ, ಎಸ್.ಪರಮೇಶ್, ಗುತ್ತಿನಾಡು ಪ್ರಕಾಶ್, ಕೆ.ಎಂ. ವೀರೇಶ್ ಮತ್ತು ಇತರರು ಭಾಗವಹಿಸಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಮಹಂತೇಶ ನಿಟುವಳ್ಳಿ ಸ್ವಾಗತಿಸಿದರು. ನಂದೀಶ ನಿರೂಪಿಸಿದರು.