ಲಿಂಗನಾಯಕನಹಳ್ಳಿ ಶಾಖಾ ಮಠದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಶ್ರೀ ಅನ್ನದಾನೇಶ್ವರ ಮಹಾಶಿವಯೋಗಿಗಳು
ಹರಪನಹಳ್ಳಿ, ಮೇ 16- ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿದ ಮಹಾನ್ ಸಂತ ಚನ್ನವೀರಸ್ವಾಮಿ ಎಂದು ಮುಂಡರಿಗಿಯ ನಾಡೋಜ ಶ್ರೀ ಅನ್ನದಾನೇಶ್ವರ ಮಹಾ ಶಿವಯೋಗಿಗಳು ಹೇಳಿದರು.
ತಾಲ್ಲೂಕಿನ ಅರಸನಾಳು ಗ್ರಾಮದ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿ ಚನ್ನವೀರಸ್ವಾಮಿ ಶಾಖಾ ಮಠದ ಜೀರ್ಣೋದ್ಧಾರ ಕಾರ್ಯಕ್ರಮ ಹಾಗೂ ಪುರಾಣ ಮಂಗಲೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿ ಶಿವಯೋಗಿಗಳು ಮಾತನಾಡಿದರು.
ಮನುಷ್ಯನು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ನಿಷ್ಠೆ, ಶ್ರದ್ಧಾ ಭಕ್ತಿಯಿಂದ ನಿರ್ವಹಿಸಿದಲ್ಲಿ ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ. ಪ್ರಗತಿಯನ್ನು ಸಾಧಿಸದ ಹೊರತು ಏನನ್ನೂ ಜಯಿಸಲಾರ ಎನ್ನುವ ತತ್ವವನ್ನು ಹೊಂದಿ ಸಮಾಜದಲ್ಲಿನ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಿ, ಸರ್ವಧರ್ಮೀಯರ ಸಮಾನತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಶರಣ ಚನ್ನವೀರ ಸ್ವಾಮಿ ಆಗಿದ್ದಾರೆ ಎಂದರು.
ನೀಲಗುಂದದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮಿ ಮಾತನಾಡಿ ಮಠಗಳೆಂದರೆ ಜೀವಂತ ಮಂದಿರಗಳಿದ್ದಂತೆ, ನಾಡಿನಲ್ಲಿ ಸಾವಿರಾರು ಮಠಗಳು ಉಚಿತವಾಗಿ ಶಿಕ್ಷಣ ಮತ್ತು ಅನ್ನ ದಾಸೋಹಗಳನ್ನು ನಡೆಸುತ್ತಾ, ದೀನ ದಲಿತರ ಮಕ್ಕಳ ಬಾಳಿಗೆ ಬೆಳಕನ್ನು ನೀಡುತ್ತಾ ಬಂದಿವೆ. ಈ ಶಾಖಾ ಮಠವು ನಾಡಿನಲ್ಲಿ ಶಿಕ್ಷಣ ಅನ್ನ ದಾಸೋಹಗಳನ್ನು ನಡೆಸುತ್ತಾ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲು ಸಹಕರಿಸಿರಿ ಎಂದರು.
ಗ್ರಾಮೀಣ ಭಾಗದಲ್ಲಿ ಇಂದಿಗೂ ಜಾತಿ ಪದ್ದತಿಗಳು ಜೀವಂತವಾಗಿವೆ, ಆ ರೀತಿಯ ಬಾಲಿಶ ಧೋರಣೆಯನ್ನು ಕಾಣದೆ, ಸಮಾಜದಲ್ಲಿ ಎಲ್ಲರೂ ಒಂದೇ ರೀತಿಯ ವಾತಾವರಣ ನಿರ್ಮಿಸಿಕೊಂಡು, ಶರಣ ಚನ್ನವೀರಸ್ವಾಮಿಯ ತತ್ವ, ಸಿದ್ದಾಂತಗಳನ್ನು ರೂಢಿಸಿಕೊಳ್ಳಿ, ಶ್ರಮವಹಿಸಿ ದುಡಿಯಿರಿ ಎಂದರು.
ಚನ್ನವೀರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಪಾಟೀಲ್ ಮಾತನಾಡಿ, ಒಂದೂವರೆ ವರ್ಷಗಳ ಸತತ ಪ್ರಯತ್ನ ಮತ್ತು ಊರಿನ ಎಲ್ಲಾ ಸಮಾಜದವರ ಸಹಕಾರದಿಂದ, 65 ಲಕ್ಷಕ್ಕೂ ಅಧಿಕ ಖರ್ಚಿನೊಂದಿಗೆ ಚನ್ನವೀರ ಸ್ವಾಮಿಗಳ ದೇವಸ್ಥಾನವು ಯಶಸ್ವಿಯಾಗಿ ನೆರವೇರಿದೆ. ಇಂತಹ ಧಾರ್ಮಿಕ ಕಾರ್ಯದಲ್ಲಿ ಅತೀ ಕಡುಬಡವನಾದ ಕೇವಲ ಅರ್ಧ ಎಕರೆ ಜಮೀನು ಹೊಂದಿರುವ ಲಕ್ಕಪ್ಪ ದೇವಸ್ಥಾನ ನಿರ್ಮಾಣಕ್ಕಾಗಿ 45 ಸಾವಿರ ರೂ.ಗಳನ್ನು ದೇಣಿಗೆ ನೀಡಿದ್ದಾರೆ ಎಂದು ಸ್ಮರಿಸಿ, ಈ ರೀತಿಯ ನಿಸ್ವಾರ್ಥ ಸೇವೆ ನೀಡಲು ಪ್ರತಿಯೊಬ್ಬರ ಮುಂದೆ ಬಂದಲ್ಲಿ ನಮ್ಮ ಗ್ರಾಮದ ಅಭಿವೃಧ್ದಿಗಾಗಿ ಯಾರ ಸಹಕಾರವಿಲ್ಲದೇ ಬೆಳೆಯಬಹುದು ಎಂದರು.
ಲಿಂಗನಾಯಕನಹಳ್ಳಿ ಡಾ. ಚನ್ನವೀರ ಶಿವಯೋಗಿಗಳು, ಅರಸಿಕೇರೆ ಶಾಂತಲಿಂಗ ದೇಶೀಕೇಂದ್ರ ಸ್ವಾಮೀಜಿ, ಹಾವನೂರು ದಳವಾಯಿ ಮಠದ ಶಿವಕುಮಾರಸ್ವಾಮಿ, ಡಿ .ಕೊಟ್ರಬಸಪ್ಪ, ಶ್ರೀಕಾಂತರೆಡ್ಡಿ, ಹೆಚ್ ರುದ್ರಪ್ಪ, ಗಿರಿರಾಜರೆಡ್ಡಿ, ಶ್ರೀಧರ, ಡಿ. ವಿಠೋಬಪ್ಪ, ಬಸವರಾಜಪ್ಪ, ಕುಂಚೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಣಕಾರ, ಕೂಬ್ಯಾನಾಯ್ಕ ಪ್ರಭಾವತಿ ಕೃಷ್ಣಪ್ಪ, ಪಾಟೀಲ್, ಜಗನ್ನಾಥ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.