ಗಾಳಿ, ಮಳೆಗೆ ಧರೆಗುರುಳಿದ ಅಡಿಕೆ ಮರಗಳು : ಮಾಯಕೊಂಡ ಶಾಸಕ ಬಸವಂತಪ್ಪ ಭೇಟಿ
ದಾವಣಗೆರೆ, ಮೇ 14 – ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಸುರಿದ ಮಳೆ, ಗಾಳಿಗೆ ಬೆಳೆ ಹಾನಿಯಾದ ತೋಟಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ ರಾತ್ರಿ ಮಳೆ, ಗಾಳಿಗೆ ತಾಲ್ಲೂಕಿನ ಅಣಬೇರು ಗ್ರಾಮದ ರೈತರ ಅಡಿಕೆ ತೋಟಗಳಲ್ಲಿ ಫಲಕ್ಕೆ ಬಂದ ಸುಮಾರು 150 ರಿಂದ 200 ಅಡಿಕೆ ಮರಗಳು ಧರೆಗುರುಳಿವೆ. ಹಾನಿಗೊಳಗಾದ ತೋಟಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಮಳೆ, ಗಾಳಿಗೆ ಅಡಿಕೆ ಮರಗಳು ನೆಲಕ್ಕುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸರ್ಕಾರದಿಂದ ಪರಿಹಾರ ಕೊಡಿಸು ವಂತೆ ರೈತರು ಶಾಸಕರಿಗೆ ಮನವಿ ಮಾಡಿದರು. ತೋಟಗಳಿಗೆ ಭೇಟಿ ನೀಡಿ ಮಳೆ, ಗಾಳಿಗೆ ಹಾನಿ ಯಾಗಿರುವ ಬೆಳೆ ವರದಿ ತಯಾರಿಸಿ, ಸರ್ಕಾರ ಸಲ್ಲಿಸುವ ಮೂಲಕ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಸಂಪರ್ಕಿಸಿ, ಸೂಚನೆ ನೀಡಿದರು.
ರೈತನಿಗೆ ಧೈರ್ಯ ತುಂಬಿದ ಶಾಸಕ :
ಮಳೆ ಕೊರತೆ, ಬೋರ್ ವೆಲ್ ನಲ್ಲಿ ನೀರು ಕುಸಿತದಿಂದ ಅಡಿಕೆ ಮರಗಳು ಒಣಗುವುದನ್ನು ಕಂಡು ಬೇಸತ್ತ ಹೊನ್ನಾಯಕನಹಳ್ಳಿ ಗ್ರಾಮದ ರೈತ ಶಾಸ್ತ್ರಿಹಳ್ಳಿ ಬಸವರಾಜಪ್ಪ ಎಂಬುವರು ತಮ್ಮ 2 ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಕಡಿದು ಸುಟ್ಟು ಹಾಕಿದ್ದ ವಿಷಯ ತಿಳಿದ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ರೈತ ಬಸವರಾಜಪ್ಪ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಗ್ರಾಮದ ಎಚ್.ಡಿ. ಕಿರಣಕುಮಾರ್, ದೇವೇಂದ್ರಪ್ಪ, ಸಿದ್ದೇಶ್, ಹನುಮಂತಪ್ಪ, ಸಿದ್ದಪ್ಪ ಇದ್ದರು.
ಕ್ಷೇತ್ರದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಆದರೆ ಈ ಬಾರಿ ಬರಗಾಲ ಎದುರಾಗಿ ರೈತರು ಕಂಗಾಲಾಗಿದ್ದರೂ ಕೆಲವು ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ವಿಮೆ ಪಾವತಿಸಿದರೆ, ಇನ್ನು ಕೆಲವು ಗ್ರಾಪಂಗಳಲ್ಲಿ ವಿಮೆ ಪಾವತಿಸಿಲ್ಲ. ಈಗ ಗಾಳಿ, ಮಳೆಗೆ ಬೆಳೆ ಹಾನಿಯಾಗಿರುವ ರೈತರು ಬೆಳೆ ವಿಮೆ ಕಟ್ಟಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು ಬೆಳೆ ವಿಮೆ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಬಳಿಕ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ ಶಾಸಕರು, ಪರಿಶೀಲನೆ ನಡೆಸಿದರು. ಶಾಲೆಯ ಕೊಠಡಿಗಳಲ್ಲಿ ಶಿಥಿಲ ಗೊಂಡು ಆರ್.ಸಿ.ಸಿ.ಯ ಚಕ್ಕಳ ಕಿತ್ತುಕೊಂಡಿದೆ. ಇದರಿಂದ ಮಳೆ ಬಂದಾಗ ಸೋರುತ್ತಿವೆ ಎಂದು ಗ್ರಾಮಸ್ಥರು ಶಾಸಕರಿಗೆ ಸಮಸ್ಯೆ ಬಿಚ್ಚಿಟ್ಟರು.
ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಕೆ.ಎಸ್. ಬಸವಂತಪ್ಪ ಪರಿಶೀಲಿಸಿದರು. ಈ ವೇಳೆ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಕಳಪೆ ಆಗಿರುವುದನ್ನು ಕಂಡು ಗುತ್ತಿಗೆ ದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮ ಗಾರಿ ಕುರಿತು ಮಾಹಿತಿ ನೀಡಿ, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಸೂಚನೆ ನೀಡಬೇಕು. ಕಳಪೆ ಮಾಡಿರುವ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಣಬೇರು ಗ್ರಾಮ ಪಂಚಾಯತಿ ಅಧ್ಯಕ್ಷ ಬುಡೇನ್ ಸಾಬ್, ಸದಸ್ಯ ಮಹಾರುದ್ರಪ್ಪ, ಜಾಫರ್ ಶರೀಫ್, ಸೇರಿದಂತೆ ರೈತರು, ಗ್ರಾಮಸ್ಥರು ಹಾಜರಿದ್ದರು.