ಕೊಟ್ಟೂರು, ಮೇ 8 – ಪಟ್ಟಣದ ಆರಾಧ್ಯ ದೇವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಅಕ್ಷಯತದಿಗಿ ಅಮಾವಾಸ್ಯೆ ನಿಮಿತ್ತ ಬುಧವಾರ ಭಕ್ತರು ದಂಡು ದಂಡಾಗಿ ಆಗಮಿಸಿ, ಬಿರು ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಪಡೆದರು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಹಿರೇಮಠದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ಮಹಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಪೂಜೆಗಳಲ್ಲಿ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲದೆ, ಅನ್ಯ ಜಿಲ್ಲೆಗಳಿಂದ ಭಕ್ತರು ಆಗಮಿಸಿ, ದೇವಸ್ಥಾನದ ಸ್ವಾಮಿಯ ದರ್ಶನ ಪಡೆದರು.
ದೇವಸ್ಥಾನಕ್ಕೆ ಹೋಗುವ ಬಲಭಾಗದಲ್ಲಿ 200 ಮೀಟರ್ ಹಳೆ ಪಟ್ಟಣ ಪಂಚಾಯಿತಿ ವರೆಗೂ ಸರತಿಯಲ್ಲಿ ನಿಂತ ಭಕ್ತರಿಗೆ ನೆರಳಿಗಾಗಿ ಎರಡೂ ಬದಿಗಳಲ್ಲಿ ಶಾಮಿಯಾನ ವ್ಯವಸ್ಥೆಯನ್ನು ದೇವಸ್ಥಾನದ ದತ್ತಿ ಇಲಾಖೆ ಮಾಡಿತ್ತು.
ದರ್ಶನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀ ಸ್ವಾಮಿಯ ಪ್ರಸಾದ ಸ್ವೀಕರಿಸಿ, ಭಕ್ತಿಯಿಂದ ನಮಿಸಿದರು.