ಚುನಾವಣಾ ಜಾಗೃತಿಗೆ ಜಿಲ್ಲಾಡಳಿತದಿಂದ ಗಾಳಿಪಟ
ದಾವಣಗೆರೆ, ಏ. 23 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಇವರ ಸಹಾಯದೊಂದಿಗೆ ಸೋಮವಾರ ಹೈಸ್ಕೂಲ್ ಮೈದಾನದಲ್ಲಿ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು .
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ.ಇಟ್ನಾಳ್ ಮಾತನಾಡಿ ವಿಭಿನ್ನ ರೀತಿಯಲ್ಲಿ ಉನ್ನತ ಮಟ್ಟದಲ್ಲಿ ಗಾಳಿಪಟ ಹಾರಿಸುವ ಮೂಲಕ ಮತದಾನ ಜಾಗೃತಿ ಸಂದೇಶ ನೀಡಲಾಗಿದೆ. ಗಾಳಿಪಟವು ಹೇಗೆ ಸ್ವತಂತ್ರವಾಗಿ ಹಾರಾಡುತ್ತದೆಯೋ, ಅದೇ ರೀತಿ ನೀವೂ ಸಹ ಸ್ವತಂತ್ರವಾಗಿ, ನ್ಯಾಯ ಸಮ್ಮತವಾಗಿ, ಯಾವುದೇ ಆಮಿಷಗಳಿಗೆ ಒಳಗಾಗದೇ ಮೇ 7 ರಂದು ತಮ್ಮ ಅಮೂಲ್ಯ ಮತ ಚಲಾಯಿಸಬೇಕೆಂದು ತಿಳಿಸಿದರು. ಗಾಳಿಪಟದಲ್ಲಿ ಮತದಾರರ ಸಂದೇಹ, ಮಾಹಿತಿಗೆ 1950 ಬಳಸಿ, ಯಾವುದೇ ಮತದಾರರು ಮತದಾನದಿಂದ ಹೊರಗುಳಿಯಬಾರದು. ಮೇ 7 ರಂದು `ನಮ್ಮ ನಡೆ, ಮತಗಟ್ಟೆ ಕಡೆ’ ಎಂಬ ಇತ್ಯಾದಿ ಘೋಷ ವಾಕ್ಯಗಳು ಗಾಳಿಪಟದಲ್ಲಿ ರಾರಾಜಿಸುತ್ತಿದ್ದವು.
ಕಾರ್ಯಕ್ರಮದಲ್ಲಿ ಚುನಾವಣಾ ಐಕಾನ್ ಚಿತ್ರನಟ ಪೃಥ್ವಿ ಶಾಮನೂರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಾಯತ್ರಿ ಕೆ.ಎಚ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬೇಬಿ ಸುನೀತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.