ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿಪಿಐ (ಎಂ) ಅಭ್ಯರ್ಥಿ ಬೆಂಬಲಿಸಲು ಹಾಗೂ ಉಳಿದ 27 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಸಿಐಟಿಯು ತೀರ್ಮಾನಿಸಿದೆ.
– ಕೆ. ಮಹಾಂತೇಶ್, ರಾಜ್ಯ ಕಾರ್ಯದರ್ಶಿ, ಸಿಐಟಿಯು
ದಾವಣಗೆರೆ, ಏ.19- ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸುವಂತೆ ಕಾರ್ಮಿಕ ವರ್ಗಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರೆ ನೀಡಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಕೆ., ನಮ್ಮ ಸಂಘಟನೆ ಹಿಂದಿನಿಂದಲೂ ಕಾರ್ಮಿಕ, ಶ್ರಮಿಕ ಹಾಗೂ ಸಾಮಾನ್ಯ ಜನ ವಿರೋಧಿ ನೀತಿಗಳ ವಿರುದ್ಧ ಪಕ್ಷಬೇಧ ಮರೆತು ಹೋರಾಟ ನಡೆಸುತ್ತಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ವ್ಯಕ್ತಿಗಳನ್ನು ವೈಭವೀಕರಿಸಿ, ಜನ ಸಾಮಾನ್ಯರ ಸಮಸ್ಯೆಗಳನ್ನು ನಗಣ್ಯ ಮಾಡುವ ವ್ಯವಸ್ಥೆ ನಡೆಯುತ್ತಿದೆ. ಇದರ ಬದಲು ಜನರ ಸಮಸ್ಯೆಗಳು ಚರ್ಚೆಗೆ ಬರಬೇಕು ಎಂದರು.
ದೇಶದಲ್ಲಿ ಶೇ.97ರಷ್ಟಿ ರುವ ಅಸಂಘಟಿತ ಕಾರ್ಮಿಕ ರಿಗೆ ಮೂಲ ಸೌಲಭ್ಯಗಳು ದೊರೆತಿಲ್ಲ. ಹೊಸ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದೆ. ಮೋದಿ ಸರ್ಕಾರದ ನೀತಿಗಳು ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚು ಅನುಕೂಲವಾಗಿವೆ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆ ಕಾರ್ಮಿಕ ವರ್ಗದ ಪಾಲಿಕೆಗೆ ಮಾಡು ಇಲ್ಲವೇ ಮಡಿ ಯುದ್ಧದಂತಿದೆ. ಈ ಕಾರಣದಿಂದಾಗಿ ಶ್ರಮಿಕ, ಕಾರ್ಮಿಕ ವರ್ಗದ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾಜು ಕೆ.ಹೆಚ್, ಎಲ್ಐಸಿ ಪ್ರತಿನಿಧಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ. ಪಂಪಣ್ಣ, ಫೆಡರೇಷನ್ ಆಫ್ ಆಟೋರಿಕ್ಷಾ ಚಾಲಕರ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸ ಮೂರ್ತಿ ಕೆ., ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿ ನಿಧಿಗಳ ಸಂಘದ ವೆಂಕಟೇಶ್ ಎ. ಉಪಸ್ಥಿತರಿದ್ದರು.