ಮಲೇಬೆನ್ನೂರು, ಏ.19- ಮಳೆ – ಬೆಳೆ ಇಲ್ಲದೇ ಬರಗಾಲ ಎದುರಿಸುತ್ತಿರುವ ಕೊಕ್ಕನೂರಿನ ಗ್ರಾಮಸ್ಥರು ತಮ್ಮ ನೆಚ್ಚಿನ ಹನುಮಪ್ಪನಿಗೆ ನೋಟಿನ ಹಾರಗಳನ್ನು ಹಾಕುವ ಮೂಲಕ ಭಕ್ತಿಗೆ ಬರವಿಲ್ಲ ಎಂಬುದನ್ನು ಶುಕ್ರವಾರ ಸಾಬೀತು ಮಾಡಿದ್ದಾರೆ.
ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಅಂಗವಾಗಿ ಗ್ರಾಮದ ಪ್ರತಿ ಮನೆಗೂ ಸಂದರ್ಶನ ನೀಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹೀಗೆ ಮನೆಗಳಿಗೆ ಹೋಗುವಾಗ ಜನರು ರಸ್ತೆಗೆ ನೀರು ಹಾಕಿ ಬಹಳ ಭಕ್ತಿಯಿಂದ ಹನುಮಪ್ಪನಿಗೆ ಹಣ್ಣು – ಕಾಯಿ ಪೂಜೆ ಮಾಡಿಸಿ, ತಮ್ಮ ಕೈಲಾದಷ್ಟು ದುಡ್ಡನ್ನು ಕೊಡುತ್ತಾರೆ. ಬಹಳಷ್ಟು ಜನ ಹರಕೆ ರೂಪ ದಲ್ಲಿ ಹೊಸ ನೋಟಗಳನ್ನು ಹಾರ ಮಾಡಿ ಹಾಕುತ್ತಾರೆ. ಹನುಮಪ್ಪನಿಗೆ ಅಷ್ಟೇ ಅಲ್ಲದೇ ಗ್ರಾಮದೇವತೆ ದುರ್ಗಾಂಬ, ಮಾತಂಗ್ಯಮ್ಮ ಮತ್ತು ಜಿ.ಟಿ.ಕಟ್ಟೆ ಹಾಗೂ ಕೊಮಾರನಹಳ್ಳಿ ಬೀರಪ್ಪ ದೇವರುಗಳಿಗೂ ಜನ ಪೂಜೆ ಸಲ್ಲಿಸಿ, ಕಾಣಿಕೆ ಹಣ ನೀಡುತ್ತಾರೆ.
ಶುಕ್ರವಾರ ನಡೆದ ಗ್ರಾಮದ ಎಲ್ಲಾ ಮನೆಗಳಿಗೆ ದೇವರುಗಳ ಸಂದರ್ಶನದಲ್ಲಿ ಹನುಮಪ್ಪನ ಪಲ್ಲಕ್ಕಿಗೆ ಭಕ್ತರು ಹಾಕಿದ್ದ ಕಾಣಿಕೆ ಹಣ 12,63,199 ರೂ. ಸಂಗ್ರಹವಾಗಿದೆ.