ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಸಲಹೆ
ದಾವಣಗೆರೆ, ಮಾ.31- ಪದವಿಗಾಗಿ ಸಂಶೋಧನೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ. ಗ್ರಾಮೀಣ ಪ್ರದೇಶದ ಜನರು, ಬೀದಿ ಬದಿಯ ವ್ಯಾಪಾರಿಗಳು, ದಿನಗೂಲಿ ನೌಕರರು, ಕೃಷಿಕರು ಮತ್ತು ಕಾರ್ಮಿಕರ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಅಗತ್ಯವಿರುವ ಯೋಜನೆ ಆಧರಿಸಿ ಸಂಶೋಧನೆ ನಡೆಸಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗವು ನವದೆಹಲಿಯ ಐಸಿಎಸ್ಎಸ್ಆರ್ ಸಹಯೋಗದಲ್ಲಿ ಮೊನ್ನೆ ನಡೆದ ರಾಷ್ಟ್ರೀಯ ಮಟ್ಟದ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರಿಗೆ ಸುಲಭವಾಗಿ ಕೈಗೆಟಕುವ ರೀತಿಯಲ್ಲಿ ಸೌಲಭ್ಯ ಲಭಿಸುವಂತೆ ಮಾಡುವ ಬಹುಶಿಸ್ತೀಯ ಸಂಶೋಧನೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಸಂಶೋಧನೆಯ ವಿಧಾನ ಮತ್ತು ಅಧ್ಯಯನ ಕ್ರಮವನ್ನು ಸುಲಭಗೊಳಿಸಿವೆ. ಅವುಗಳ ಪ್ರಯೋಜನ ಪಡೆದು ಗುಣಮಟ್ಟದ ಸಂಶೋಧನೆಗೆ ಆದ್ಯತೆ ನೀಡಬೇಕೇ ಹೊರತು ತಂತ್ರಜ್ಞಾನವನ್ನೇ ಅವಲಂಬಿಸಬಾರದು ಎಂದರು.
ವಾಣಿಜ್ಯ ಮತ್ತು ಆಡಳಿತ ನಿಕಾಯದ ಡೀನ್ ಪ್ರೊ.ಆರ್. ಶಶಿಧರ್ ಮಾತನಾಡಿ, ಆಧುನಿಕ ತಂತ್ರಜ್ಞಾನಗಳು ಸಂಶೋಧನಾ ಕ್ರಮದ ದತ್ತಾಂಶ ವಿಶ್ಲೇಷಣೆ ಹಾಗೂ ನಿರ್ವಹಣೆಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಜಟಿಲ ಸಮಸ್ಯೆ ಗಳಿಗೂ ತಕ್ಷಣವೇ ಪರಿಹಾರ ಕಂಡುಕೊಳ್ಳುವ ಅವಕಾಶ ಕಲ್ಪಿಸಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ವ್ಯಾಪ್ತಿ ವಿಶಾಲವಾಗಿ ಹರಡಿದೆ. ಗುಣಮಟ್ಟದ ಸಂಶೋಧನೆಯ ಮೂಲಕ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಕಲಾ ಮತ್ತು ಮಾನವಿಕ ಅಧ್ಯಯನ ನಿಕಾಯದ ಡೀನ್ ಪ್ರೊ. ಸುಚಿತ್ರಾ ಸ್ವಾಗತಿಸಿದರು. ಡಾ.ಸುಂದರಂ ವರದಿ ವಾಚಿಸಿದರು. ಕಾರ್ಯಾಗಾರದ ನಿರ್ದೇಶಕ ಪ್ರೊ. ಹುಚ್ಚೇಗೌಡ ವಂದಿಸಿದರು.
ಕುಲಸಚಿವ ಪ್ರೊ.ಯು.ಎಸ್. ಮಹಾಬಲೇಶ್ವರ, ಪ್ರೊ. ಸೆಲ್ವಿ, ಡಾ.ಡಿ.ಎಚ್. ಗಿರೀಶ್ ಇದ್ದರು.