ಮಲೇಬೆನ್ನೂರು, ಏ. 1- ಲಕ್ಕಶೆಟ್ಟಿಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಗ್ರಾಮದ ಬಣಕಾರರಿಂದ ದೇವಿಗೆ ಎಣ್ಣಿ ಅರಿಷಿಣದಿಂದ ಪೂಜೆ ಸಲ್ಲಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಇಂದು ಮಂಗಳವಾರ ಗ್ರಾಮದ ರೈತರಿಂದ ಪೂಜೆ ಹಾಗೂ ಧ್ವಜಾರೋಹಣ, ನಂತರ ಬ್ರಾಹ್ಮೀ ಮುಹೂರ್ತ ದಲ್ಲಿ ದೇವಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಂಕುರಾರ್ಪಣೆ, ನವಗ್ರಹ ಕಲಶ, ಅಷ್ಟಪಾಲಕರನ್ನು ಸ್ಥಾಪಿಸು ವುದು. ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯುವುದು. ನಂತರ ದೇವಿಗೆ ಕುಂಕುಮಾರ್ಚನೆ ಮಾಡುವುದು. ನಂತರ ಮಧ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 9-30ಕ್ಕೆ ದೊಡ್ಡಗೌಡ್ರ ಮನೆಯಿಂದ ದೊಡ್ಡಬಂಡಿಯ ರಥವನ್ನು ಹೊರಡಿಸಿ, ನಿಂಗಪ್ಪ ನವರ ಮನೆಗೆ ಹೋಗಿ ಪೂಜೆ ಮಾಡಿಸಿ ನಂತರ ಬಸವೇಶ್ವರ ದೇವಸ್ಥಾನಕ್ಕೆ ಬರುವುದು. ಗೌಡ್ರ ಮನೆಯಿಂದ ದೇವಿಯನ್ನು ಬಸವೇಶ್ವರ ದೇವಸ್ಥಾನಕ್ಕೆ ಕರೆತಂದು ದೊಡ್ಡ ಬಂಡಿ ಮೇಲೆ ಸಿಂಗರಿಸಿದ ರಥದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ರಾತ್ರಿ ಸಮಯದಲ್ಲಿ ಸಣ್ಣಗೌಡ್ರ ಮನೆಯಿಂದ ಘಟ್ಟಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ನೆಲೆಗೊಳಿಸುವುದು. ದೊಡ್ಡಗೌಡ್ರ ಮನೆಯಿಂದ-ಬಣಕಾರ ಮನೆಯಿಂದ ಹುಲುಸಿನ ಜೋಳವನ್ನು ದೇವಸ್ಥಾನಕ್ಕೆ ತರುವುದು.
ಏಪ್ರಿಲ್ 3 ರ ಬುಧವಾರ ಬೆಳಗಿನ ಜಾವ 4 ರಿಂದ 6 ರವರೆಗೆ ದೇವಿಯ ಘಟ್ಟಿ ಗಡಿಗೆ ಮತ್ತು ಹಿಟ್ಟಿನ ಕೋಣವನ್ನು ಉತ್ಸವದ ಮೂಲಕ ದೇವಸ್ಥಾನದ ಬಳಿ ತರುವುದು. ನಂತರ ಹಿಟ್ಟಿನಿಂದ ಮಾಡಿದ ಕೋಣವನ್ನು ವಧೆ ಮಾಡಿ ನಂತರ ಚರಗ ಚೆಲ್ಲಲಾಗುವುದು.
ಏಪ್ರಿಲ್ 4 ರ ಗುರುವಾರ ಸಂಜೆ ಮೇಳದವರಿಂದ ಚೌಡಕಿ ಕಾರ್ಯಕ್ರಮ ಜರುಗುವುದು. ನಂತರ ರಾತ್ರಿ 9 ಗಂಟೆಗೆ ಗ್ರಾಮದ ಮಾರುತಿ ನಾಟ್ಯ ಸಂಘದವರಿಂದ `ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ’ ನಾಟಕ ಪ್ರದರ್ಶನವಿದೆ.
ದಿನಾಂಕ 5ರ ಶುಕ್ರವಾರ ಬೆಳಿಗ್ಗೆ ಮುತ್ತೈದೆಯರಿಂದ ದೇವಿಗೆ ತಾಳಿ, ಕಡಗ ಹಾಕಿಸಿ ಉಡಿ ತುಂಬುವುದು ನಂತರ ರೈತರಿಂದ ಹುಲಸಿನ ಜೋಳವನ್ನು ಹಂಚುವ ಕಾರ್ಯಕ್ರಮವಿರುತ್ತದೆ.