ಕಟ್ಟಡ ಕಾರ್ಮಿಕರ ಬೋಗಸ್ ಕಾರ್ಡು ರದ್ದು ಮಾಡಲು ಎಐಟಿಯುಸಿ ಆಗ್ರಹ

ಕಟ್ಟಡ ಕಾರ್ಮಿಕರ ಬೋಗಸ್ ಕಾರ್ಡು  ರದ್ದು ಮಾಡಲು ಎಐಟಿಯುಸಿ ಆಗ್ರಹ

ದಾವಣಗೆರೆ, ಫೆ.29- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಏಕ ವ್ಯಕ್ತಿ ನಿರ್ಧಾರದಿಂದ ನೈಜ ಕಾರ್ಮಿಕರ ಹಣ ವ್ಯರ್ಥವಾಗಿ ಹೋಗುತ್ತಿದ್ದು, ಇದನ್ನು ತಡೆಗಟ್ಟುವಂತೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಗುರುವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ರಾಜಾಧ್ಯಕ್ಷ ಆವರಗೆರೆ ಹೆಚ್.ಜಿ.ಉಮೇಶ್, ಇಲಾಖೆಯ ಮಾಹಿತಿ ಪ್ರಕಾರ ರಾಜ್ಯಾದ್ಯಂತ 58 ಲಕ್ಷ ಕಾರ್ಡುಗಳಿವೆ. ಅದರಲ್ಲಿ ಶೇ.75ರಷ್ಟು ಬೋಗಸ್ ಕಾರ್ಡುಗಳು ಎಂದು ಕಾರ್ಮಿಕ ಸಚಿವರೇ ಹೇಳಿದ್ದಾರೆ.  ಕೂಡಲೇ ಬೋಗಸ್‌ ಕಾರ್ಡುಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಯೋಜನೆಗಳಿಗೆ ರಾಷ್ಟ್ರದ ಯಾವುದೇ ರಾಜ್ಯಗಳು ವಿನಿಯೋಗಿಸಬಾರದು. ಅದನ್ನು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಮೀಸಲಿಡಬೇಕೆಂದು ಒತ್ತಾಯಿಸಿದರು.

1996ರ ಕಟ್ಟಡ ನಿರ್ಮಾಣ ಕಾರ್ಮಿಕರ ಕಾಯಿದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಕಾಯ್ದೆಯನ್ನು ಕಾರ್ಮಿಕರ ವಿರುದ್ಧವಾಗಿ ತಿದ್ದುಪಡಿ ಯಾಗದಂತೆ ನೋಡಿಕೊಳ್ಳಬೇಕು.   ಕಟ್ಟಡ ಕಾರ್ಮಿಕರ ಕುಟುಂಬ ಒಳಗೊಂಡಂತೆ ಇ.ಎಸ್.ಐ. ಮಾದರಿ ಹಣ ರಹಿತ ಚಿಕಿತ್ಸೆಯನ್ನು ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಕೆಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ
ವಿ.ಲಕ್ಷ್ಮಣ್, ಶಿವಕುಮಾರ್ ಡಿ.ಶೆಟ್ಟರ್, ಸುರೇಶ್ ಯರಗುಂಟೆ, ಎಸ್.ಬಿ.ರುದ್ರೇಶ್, ಚಂದ್ರಶೇಖರ್,  ಹೆಚ್.ಕೆ.ಆರ್. ಸುರೇಶ್, ಎಸ್.ಎಂ.ಸಿದ್ದಲಿಂಗಪ್ಪ, ಜಗಳೂರು ವೀರಣ್ಣ, ಬಿ.ಎಂ.ಮಲ್ಲಿಕಾರ್ಜುನಪ್ಪ, ಡಿ.ಷಣ್ಮುಗಂ, ಮಹೇಶ್ ದೊಣ್ಣೆಹಳ್ಳಿ, ಮಹೇಶ್  ಸೇರಿದಂತೆ ಇತರರು ಇದ್ದರು.

error: Content is protected !!