ನೂತನ ವಿದ್ಯಾಸಂಸ್ಥೆ ಅಧ್ಯಕ್ಷ ಪರಶುರಾಮನಗೌಡ ಅಭಿಮತ
ದಾವಣಗೆರೆ, ಫೆ.29- ಶಿಕ್ಷಕರು ವೈಜ್ಞಾನಿಕ ಮನೋ ಭಾವನೆ ಬೆಳೆಸಿಕೊಳ್ಳಬೇಕು ಮತ್ತು ಪ್ರಶಿಕ್ಷಣಾರ್ಥಿ ಗಳಿಗೆ ವಿಜ್ಞಾನ ಮತ್ತು ಸಂಶೋಧನಾ ಮಹತ್ವದ ಅರಿವು ಮೂಡಿಸಬೇಕು ಎಂದು ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಪರಶುರಾಮನಗೌಡ ಹೇಳಿದರು.
ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಿತಶಾಸ್ತ್ರ ಅಧ್ಯ ಯನ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಡಾ. ಬಿ.ಸಿ. ಪ್ರಸನ್ನ ಕುಮಾರ್ ಮಾತನಾಡಿ, ವಿಜ್ಞಾನವನ್ನು ಶಾಂತಿ ಹಾಗೂ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು. ನಮ್ಮ ದೇಶದ ಹೆಮ್ಮೆ `ಚಂದ್ರಯಾನ’ ಎಂದು ಹೇಳಿದರು. ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಪಂಚದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಸಿ.ವಿ. ರಾಮನ್ರವರ ಸಂಶೋಧನೆಯು ಯುವ ವಿಜ್ಞಾನಿಗಳಿಗೆ ಸ್ಫೂರ್ತಿದಾಯಕ ಎಂದು ತಿಳಿಸಿದರು.
ನೂತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಎಸ್.ದಿವಾಕರ ನಾಯ್ಕ್ ಮಾತನಾಡಿ, `ಅಭಿವೃದ್ಧಿ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು’ ಈ ವರ್ಷದ ಧ್ಯೇಯ ವಾಕ್ಯದ ಮಹತ್ವವನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಪ್ರಪಂಚದಲ್ಲಿ ಹೆಚ್ಚು ಯುವ ಜನತೆ ಹೊಂದಿರುವ ದೇಶ ಭಾರತ, ಯುವ ಜನಾಂಗವು ಹೆಚ್ಚು ಹೆಚ್ಚು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಭಾರತವನ್ನು ಅಭಿವೃದ್ಧಿ ಹಾಗೂ ಪ್ರಗತಿಪರ ರಾಷ್ಟ್ರವನ್ನಾಗಿಸಲು ಸಹಾಯಕಾರಿಯಾಗುತ್ತದೆ.
ಪ್ರಶಿಕ್ಷಣಾರ್ಥಿ ಕು. ಎಂ.ಎಂ. ರಕ್ಷಿತಾ ಪ್ರಾರ್ಥಿಸಿದರು. ಕು. ಬಿ.ಎಂ. ಅನುಷಾ ಅತಿಥಿಗಳನ್ನು ಸ್ವಾಗತಿಸಿದರು. ಕು. ಎಂ.ಪಿ.ಪ್ರಿಯಾಂಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕುರಿತು ಮಾತನಾಡಿದರು. ಕು. ಶ್ವೇತಾ ಮುದೇಗೌಡ್ರ ಅತಿಥಿಗಳ ಪರಿಚಯ ಮಾಡಿದರೆ, ಕು. ಎಸ್.ಸಿ.ಕಾವ್ಯ ವಂದಿಸಿದರು. ಕು. ಎಫ್. ಸುಹಾನಾ ಖಾನ್ ಕಾರ್ಯಕ್ರಮ ನಿರೂಪಿಸಿದರು.