ಹೂವಿನಹಡಗಲಿ, ಫೆ.26- ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಕಾರಣಿಕೋತ್ಸವ ಸೋಮವಾರ ಸಂಜೆ ಜರುಗಿತು.
ಡೆಂಕನ ಮರಡಿ ತಲುಪಿ, ಕಾರಣಿಕದ ಮೈದಾನಕ್ಕೆ ಬಂದ ಗೊರವಪ್ಪ, ಸರ ಸರನೆ ಬಿಲ್ಲನ್ನೇರಿ ಸದ್ದಲೇ ಎಂದಾಕ್ಷಣ `ಸಂಪಾದಿತಲೇ ಪರಾಕ್’ ಎಂಬ ಭವಿಷ್ಯ ವಾಣಿ ನುಡಿದರು.
ವಿಶ್ಲೇಷಣೆ; ಪ್ರತಿ ವರ್ಷದ ಪದ್ಧತಿಯಂತೆ ನುಡಿಯುತ್ತಿದ್ದ ಕಾರಣಿಕ ಕ್ಕೂ ಮತ್ತು ಈ ವರ್ಷ ನುಡಿದ ಕಾರಣಿಕ ಗಮನಿಸಿದ ಭಕ್ತರು ಚಕಿತಗೊಂಡರು.
ಇದೊಂದು ಅಪೂರ್ಣ ಕಾರಣಿಕ. ಏಕೆಂದರೆ, ಇದರಲ್ಲಿ ಯಾವುದೇ ರೀತಿಯ ಕುತೂಹಲವಿಲ್ಲ. ರಾಜ್ಯದಲ್ಲಿ ಮಳೆ, ಬೆಳೆ, ರಾಜಕಾರಣ ಸೇರದಂತೆ ಪ್ರತಿಯೊಂದು ಯೋಜನೆಗಳು ಯಶಸ್ವಿಯಾಗುತ್ತವೆ ಎಂಬ ಸಂಕೇತವನ್ನು ಈ ಭವಿಷ್ಯವಾಣಿ ಸಾದರಪಡಿಸುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬರಗಾಲ ತಾಂಡವವಾಡುತ್ತಿದ್ದು ಈ ನಡುವೆ ಮೈಲಾರ ಕಾರಣಿಕ ಹೊಸ ಆಶಾಭಾವನೆ ಯನ್ನು ಮುಂಬರುವ ದಿನಗಳಲ್ಲಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
ದೇವಸ್ಥಾನದಿಂದ ಡೆಂಕನ ಮರಡಿಗೆ ಮೌನ ಸವಾರಿಯಲ್ಲಿ ಅಶ್ವಾರೂಢರಾಗಿ ಧರ್ಮಕರ್ತರಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಆಗಮಿಸಿದ ನಂತರ ಭಕ್ತರು ಬಿಲ್ಲನ್ನು ಹೊತ್ತು ತಂದರು.
ಈ ವೇಳೆಗಾಗಲೇ ಕಾರಣಿಕದ ಪ್ರಾಂಗಣದಲ್ಲಿ ಧಾರ್ಮಿಕ ಆಚರಣೆ ಪದ್ಧತಿಗಳು ಜರುಗಲಾರಂಭಿಸಿದ್ದವು. ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸೇರಿದಂತೆ, ಇತರೆ ಸ್ವಾಮೀಜಿಗಳು, ಕ್ಷೇತ್ರದ ಶಾಸಕ ಕೃಷ್ಣನಾಯಕ ಮತ್ತಿತರೆ ರಾಜಕೀಯ ಮುಖಂಡರುಗಳು, ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತಿತರೆ ಅಧಿಕಾರಿಗಳು ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎ.ಸಿ.ಎಚ್ .ಗಂಗಾಧರ, ಎಂ.ಎಚ್. ಪ್ರಕಾಶ್ ರಾವ್, (ಕಾರವಾರ) ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ಮತ್ತು ಸಿಬ್ಬಂದಿ ವರ್ಗ ಹಾಗೂ ತಹಶೀಲ್ದಾರ್ ಕಾರ್ತಿಕ್ ಮತ್ತಿತರೆ ಸಿಬ್ಬಂದಿ ವರ್ಗದವರು ಉಸ್ತುವಾರಿ ವಹಿಸಿದ್ದರು. ಪೊಲೀಸರು ಸೂಕ್ತ ಬಂದೋ ಬಸ್ತ್ ಏರ್ಪಡಿಸಿದ್ದರು. ಸುಮಾರು ಏಳರಿಂದ ಎಂಟು ಲಕ್ಷ ಭಕ್ತರು ಪಾಲ್ಗೊಂಡಿದ್ದರು.