ದಾವಣಗೆರೆ, ಫೆ. 21- ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಬೃಹತ್ ಜಾಥಾಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಚಾಲನೆ ನೀಡಿದರು.
ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಜಾಥಾ, ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇದೇ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕಳೆದ ಡಿ. 27 ರಂದು ಕರವೇ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಫಲವಾಗಿ ರಾಜ್ಯದಲ್ಲಿ ಅಂಗಡಿ, ಬ್ಯಾಂಕುಗಳು, ಪೆಟ್ರೋಲ್ ಬಂಕ್‌ಗಳು, ಶಾಲಾ-ಕಾಲೇಜುಗಳು, ಇನ್ನಿತರೆ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಶೇ. 60 ರಷ್ಟು, ಇನ್ನುಳಿದ ಶೇ. 40 ರಷ್ಟು ಆಂಗ್ಲಭಾಷೆಯಲ್ಲಿ ಬಳಸಬಹುದೆಂದು ಸರ್ಕಾರವು ಆದೇಶಿಸಿತ್ತು ಎಂದರು.
ಸರ್ಕಾರದ ಆದೇಶ ಪಾಲಿಸದವರು ಇವುಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರವೇ ಫೆ. 28 ರವರೆಗೆ ಗಡುವು ನೀಡಿದೆ. ಅದರಂತೆ ಕರವೇ ಜಿಲ್ಲಾ ಘಟಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕನ್ನಡದ ಜಾಗೃತಿ ಅಭಿಯಾನ ನಡೆಸಲು ಜಿಲ್ಲಾ ಘಟಕದಿಂದ 200 ಕಾರ್ಯಕರ್ತರು ಭಾಗವಹಿಸಿರುವುದಾಗಿ ತಿಳಿಸಿದರು.
ಶೇ.60 ರಷ್ಟು ಕಡ್ಡಾಯವಾಗಿ ಕನ್ನಡದ ನಾಮಫಲಕ ಹಾಕದವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ, ಮಾ. 5 ರಂದು ಮಹಾನಗರ ಪಾಲಿಕೆಗೆ ಬೀಗ ಜಡಿಯಲಾಗುವುದು. ಇದಕ್ಕೂ ಮಣಿಯದಿದ್ದರೆ ಕರವೇ ಯಿಂದ ಮಾ. 15 ರಂದು ಆಂಗ್ಲ ನಾಮಫಲಕ ಕಿತ್ತು ಹಾಕಲಾಗುವುದು ಎಂದು ಎಚ್ಚರಿಸಿದರು.
ಜಾಗೃತಿ ಜಾಥಾ ಸಂದರ್ಭದಲ್ಲಿ ಕರವೇ ಪದಾಧಿ ಕಾರಿಗಳಾದ ವಾಸುದೇವ ರಾಯ್ಕರ್, ಮಲ್ಲಿಕಾರ್ಜುನ್, ರವಿಕುಮಾರ್, ಎನ್.ಟಿ. ಹನುಮಂತಪ್ಪ, ಎಂ.ಡಿ. ರಫೀಕ್, ಜಬೀವುಲ್ಲಾ ಪೈಲ್ವಾನ್, ಆಟೋ ರಫೀಕ್ ಮತ್ತಿತರರು ಪಾಲ್ಗೊಂಡಿದ್ದರು.