ದಾವಣಗೆರೆ, ಫೆ.5- ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಆದ್ಯತೆ ನೀಡುವಂತೆ ಮಹಾನಗರ ಪಾಲಿಕೆ ಸದಸ್ಯರ ನಿಯೋಗವು ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದೆ.
ನಗರದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೆಲ ವಾರ್ಡುಗಳಲ್ಲಿ 10-11 ದಿನಗಳಾದರೂ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಬಾತಿಯಲ್ಲಿರುವ ಪಂಪ್‌ಹೌಸ್‌ಗೆ ನಿರಂತರ ವಿದ್ಯುತ್ ಸರಬರಾಜಾಗದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಇಲಾಖೆಗೆ ನಿರ್ದೇಶಿಸಬೇಕು. ಬೇಸಿಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಸೂಚಿಸಬೇಕು.ಈ ಹಿಂದೆ ಕಾರ್ಯಾದೇಶ ನೀಡಿದ ಹರಿಹರ ವಿದ್ಯಾನಗರದ ಸಬ್ ಸ್ಟೇಷನ್‌ನಿಂದ ಬಾತಿ ಪಂಪ್‌ಹೌಸ್‌ವರೆಗೆ ಮತ್ತು ಕೋಡಿಯಾಲ್-ಹೊಸಪೇಟೆಯಿಂದ ರಾಜನಹಳ್ಳಿ ಪಂಪ್‌ಹೌಸ್ ವರೆಗೆ ಎಕ್ಸ್‌ಪ್ರೆಸ್ ಫೀಡರ್ ಅಳವಡಿಸುವ ಕಾಮಗಾರಿ ನಿಂತು ಹೋಗಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ವಿರೋಧ ಪಕ್ಷದ ನಾಯಕ ಕೆ.ಪ್ರಸನ್ನಕುಮಾರ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿತು.
ಈ ವೇಳೆ ಪಾಲಿಕೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರಾದ ಆರ್. ಶಿವಾನಂದ್, ಸೋಗಿ ಶಾಂತಕುಮಾರ್, ಶಿವಪ್ರಕಾಶ್ ಮುಖಂಡರಾದ ಯೋಗೀಶ್, ಜಯಪ್ರಕಾಶ್, ಶ್ರೀನಿವಾಸ್, ಸಂತೋಷ್ ಜಾಧವ್, ಯುವ ಮುಖಂಡರಾದ ವಿನಯ್ ದಿಳ್ಯಪ್ಪ ಉಪಸ್ಥಿತರಿದ್ದರು.