ಹೊನ್ನಾಳಿ, ಜ.18- ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ತಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿ ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅವಳಿ ತಾಲ್ಲೂಕಿನ ಪದವೀಧರ ಮಾತದಾರರನ್ನು ಭೇಟಿ ಮಾಡಲು ನಿನ್ನೆ ಹೊನ್ನಾಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎನ್.ಪಿ.ಎಸ್. ಮತ್ತು ಓಪಿಎಸ್. ನೌಕರರ ನಿವೃತ್ತಿ ಸೌಲಭ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವಧಿಯಲ್ಲಿ ಈ ಎನ್.ಪಿ.ಎಸ್. ಯೋಜನೆ ಜಾರಿಗೆ ಬಂದಿದ್ದು, ತಮ್ಮನ್ನು ಓಪಿಎಸ್ ಯೋಜನೆಗೆ ಒಳಪಡಿಸಬೇಕೆಂಬ ನೌಕರರ ಬೇಡಿಕೆ ಹಾಗೇ ಮುಂದುವರೆದುಕೊಂಡು ಬರುತ್ತಿದ್ದು, ಈಗಿನ ಕಾಂಗ್ರೆಸ್ ಸರ್ಕಾರ ಓಪಿಎಸ್ ಯೋಜನೆ ಮತ್ತೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದ್ದು, ಮುಂಬರುವ ಬಜೆಟ್ನಲ್ಲಿ ಓ.ಪಿ.ಎಸ್. ಘೋಷಣೆ ಮಾಡಿ ಹಣ ಮೀಸಲಿರಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪಉಪಮುಖ್ಯಮಂತ್ರಿ ಗಳಿಗೆ ಒತ್ತಾಯಪೂರ್ವಕ ವಿನಂತಿ ಮಾಡುತ್ತೇನೆ. ಇದರ ಜೊತೆಗೆ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ಕೂಡ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.
ಈ ಹಿಂದೆ ಅತಿಥಿ ಉಪನ್ಯಾಸಕರಿಗೆ ಸಂಬಳ ನಿಂತಾಗ ಈ ಬಗ್ಗೆ ಏಕಾಂಗಿಯಾಗಿ ಸದನದಲ್ಲಿ ಗಟ್ಟಿ ಧ್ವನಿ ಎತ್ತಿ ಅತಿಥಿ ಉಪನ್ಯಾಸಕರಿಗೆ ಸಂಬಳ ಕೊಡಿಸಿದ್ದೇನೆ. ಇದೇ ರೀತಿ ಅತಿಥಿ ಶಿಕ್ಷಕರ ಸಮಸ್ಯೆಗಳು ಕೂಡ ಇದ್ದು, ಇವುಗಳ ನಿವಾರಣೆಗೆ ಸಮರ್ಪಕವಾಗಿ ಧ್ವನಿ ಎತ್ತಿ, ಪರಿಹಾರ ಕೊಡಿಸುವಲ್ಲಿ ತಾನು ಹಿಂದೆ ಬೀಳುವುದಿಲ್ಲ ಎಂದು ಹೇಳಿದರು.
7ನೇ ವೇತನ ಆಯೋಗ ಇನ್ನೂ ಕೂಡ ಸರ್ಕಾರಕ್ಕೆ ತನ್ನ ವರದಿ ನೀಡಿಲ್ಲ. ಪ್ರಸ್ತುತ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡುತ್ತಿದೆ. ಕೂಡಲೇ ಮಧ್ಯಂತರ ಪರಿಹಾರ ನಿಲ್ಲಿಸಿ ಸರ್ಕಾರ ವರದಿ ತರಿಸಿಕೊಂಡು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಪಡಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ತಾಲ್ಲೂಕು ಅಧ್ಯಕ್ಷ ಡಾ. ಈಶ್ವರನಾಯ್ಕ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಮುಖಂಡ ಎಚ್.ಎ. ಗದ್ದಿಗೇಶ್, ಬೇಲಿಮಲ್ಲೂರು ನರಸಪ್ಪ, ಸಣ್ಣಕ್ಕಿ ಬಸವನಗೌಡ, ಸಾಸ್ವೆಹಳ್ಳಿ ಕೃಷ್ಣಮೂರ್ತಿ, ಕೆ.ಪಿ.ಸಿ.ಸಿ. ಸದಸ್ಯ ನಾಗೇಂದ್ರ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಪುಷ್ಪಾ ರವೀಶ್, ಯುವ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಆಶಾ, ಸೊರಟೂರು ಗ್ರಾ.ಪಂ. ಸದಸ್ಯೆ ಸುಮಾ, ಜಿಲ್ಲಾ ಯುವ ಕಾಂಗ್ರೆಸ್ನ ಎಚ್.ಎಸ್.ರಂಜಿತ್, ವೀರಣ್ಣ ಮುಂತಾದವರು ಇದ್ದರು.